ಧಾರವಾಡ: ಧಾರವಾಡ ನಗರದ ಸವದತ್ತಿ ರಸ್ತೆಯಲ್ಲಿ ನಡೆದ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಅವರು ಅಪಘಾತದಲ್ಲಿ ಸಾವನ್ನಪ್ಪಿಲ್ಲ, ಬದಲಾಗಿ ಪೂರ್ವ ನಿಯೋಜಿತ ಕೊಲೆ ಎನ್ನುವುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.
ಲಲಿತಾ ಎಂಬುವರಿಗೆ ಕಾರು ಡಿಕ್ಕಿಯಾಗಿ ಮೃತಪಟ್ಟಿದ್ದು, ಪ್ರಕರಣದ ತನಿಖೆ ಕೈಗೊಂಡ ಪೊಲೀಸರಿಗೆ ಆಕೆಯ ಪತಿ ಉದಯ ಆರೋಪಿ ಎಂಬುದು ಗೊತ್ತಾಗಿದೆ. ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಲಲಿತಾ ಮತ್ತು ಉದಯ 10 ವರ್ಷದ ಹಿಂದೆ ಮದುವೆಯಾಗಿದ್ದು, ಕಾರಣಾಂತರದಿಂದ ಇಬ್ಬರು ಬೇರೆಯಾಗಿ ವಾಸವಾಗಿದ್ದರು. ಲಲಿತಾ ಜೀವನಾಂಶಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದು, 2024ರಲ್ಲಿ ಒಂದೂವರೆ ಎಕರೆ ಜಮೀನನ್ನು ಲಲಿತಾಗೆ ನೀಡುವಂತೆ ಕೋರ್ಟ್ ಆದೇಶಿಸಿತ್ತು. ಇದೇ ಕಾರಣಕ್ಕೆ ಪತಿ ಉದಯ ಕೊಲೆ ಮಾಡಿಸಿದ್ದಾನೆ.
ಕೋರ್ಟ್ ಆದೇಶದ ನಂತರ ಲಲಿತಾ ಜೀವನಾಂಶ ಕೊಡುವಂತೆ ಉದಯಗೆ ಕೇಳುತ್ತಿದ್ದರು. ಹೀಗಾಗಿ ಅವರನ್ನು ಕೊಲೆ ಮಾಡಲು ತನ್ನ ಸಂಬಂಧಿ ನಾಗಪ್ಪ ಜೊತೆಗೆ ಚರ್ಚಿಸಿದ್ದ ಉದಯ 40 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದ. ಪ್ಲಾನ್ ಮಾಡಿ ಲಲಿತಾ ಅವರನ್ನು ಸವದತ್ತಿ ರಸ್ತೆಯ ದುರ್ಗಾದೇವಿ ದೇವಾಲಯದ ಬಳಿ ಕರೆಸಿಕೊಂಡು ಥಾರ್ ವಾಹನದಿಂದ ಡಿಕ್ಕಿ ಹೊಡೆಸಿ ಕೊಲೆ ಮಾಡಲು ಪ್ಲಾನ್ ಮಾಡಿಕೊಂಡಿದ್ದರು.
ಅದೇ ರೀತಿ ಥಾರ್ ವಾಹನದಿಂದ ಡಿಕ್ಕಿ ಹೊಡೆಸಿ ಕೊಲೆಗೈದು ಹಿಟ್ ಅಂಡ್ ರನ್ ಎನ್ನುವಂತೆ ಬಿಂಬಿಸಿದ್ದರು. ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಬಸ್ ನ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

