ನವದೆಹಲಿ: ಸರಕು ಮತ್ತು ಸೇವಾ ದರ(ಜಿಎಸ್ಟಿ) ಕಡಿತದ ಖುಷಿಯಲ್ಲಿ ಮುಂದಿನ ತಿಂಗಳಲ್ಲಿ ಹೊಸ ಟಿವಿ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಜನವರಿಯಿಂದ ಎಲ್ಇಡಿ ಟಿವಿ ದರ ಶೇಕಡ 3ರಿಂದ 4ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೆಮೊರಿ ಚಿಪ್ ಗಳ ಕೊರತೆ, ಚಿಪ್ ಬೆಲೆ ಹೆಚ್ಚಳ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಟಿವಿ ದರ ಏರಿಕೆಯಾಗಲಿದೆ ಎಂದು ಉತ್ಪಾದಕರು ಹೇಳಿದ್ದಾರೆ.
ದೇಶದಲ್ಲಿ ತಯಾರಿಸುವ ಎಲ್ಇಡಿ ಟಿವಿಗಳಲ್ಲಿ ಶೇಕಡ 30ರಷ್ಟು ಭಾಗ ಮಾತ್ರ ಮೇಡ್ ಇನ್ ಇಂಡಿಯಾದ್ದು. ಓಪನ್ ಸೆಲ್ ಸೆಮಿ ಕಂಡಕ್ಟರ್ ಚಿಪ್ ಗಳು ಮತ್ತು ಮದರ್ ಬೋರ್ಡ್ ಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ರೂಪಾಯಿ ಮೌಲ್ಯ ಕುಸಿತದ ಕಾರಣ ಬಿಡಿ ಭಾಗಗಳ ಆಮದು ದರ ದುಬಾರಿಯಾಗುತ್ತಿದೆ. ಈ ನಡುವೆ ಕಳೆದ ಮೂರು ನಾಲ್ಕು ತಿಂಗಳಿಂದ ಎಐ ಸರ್ವರ್ ಗಳಿಗೆ ಹೈ ಬ್ರಾಂಡ್ ವಿಡ್ತ್ ಮೆಮೊರಿ ಚಿಪ್ ಕೊರತೆ ಕಂಡು ಬಂದಿದೆ. ಹೊಸ ವರ್ಷದ ವೇಳೆಗೆ ಚಿಪ್ ಕೊರತೆ, ರೂಪಾಯಿ ಮೌಲ್ಯ ಕುಸಿತದ ಪರಿಣಾಮ ಟಿವಿ ದರ ಶೇಕಡ 3ರಿಂದ 4ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

