ಬೆಂಗಳೂರು: ಆಸ್ತಿ ತೆರಿಗೆ ಪಾವತಿಸದ 7020 ಮಾಲೀಕರ ಆಸ್ತಿಗಳ ಹರಾಜಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಮುಂದಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿರುವ ಐದು ನಗರ ಪಾಲಿಕೆಗಳಲ್ಲಿ 7020 ಆಸ್ತಿ ಮಾಲೀಕರು ಒಟ್ಟು 437.37 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಈ ಬಗ್ಗೆ ಆಸ್ತಿ ಮಾಲೀಕರಿಗೆ ನೋಟಿಸ್ ಕಳುಹಿಸಿದ್ದರೂ ತೆರಿಗೆ ಪಾವತಿಸದ ಕಾರಣ ಮುಂದಿನ ಕ್ರಮಕ್ಕಾಗಿ ಜಪ್ತಿ ಆದೇಶಗಳನ್ನು ಹೊರಡಿಸಲಾಗಿತ್ತು. ಜಪ್ತಿ ಆದೇಶದ ನಂತರವೂ ತೆರಿಗೆ ಪಾವತಿಸದ ಕಾರಣ ಕೊನೆಯ ಕ್ರಮವಾಗಿ ಈ ಆಸ್ತಿಗಳನ್ನು ಫೆಬ್ರವರಿ 17ರಂದು ಆಯಾ ವಲಯಗಳ ಜಂಟಿ ಆಯುಕ್ತರ ಕಚೇರಿಗಳಲ್ಲಿ ಹರಾಜು ಮಾರಾಟಕ್ಕೆ ದಿನಾಂಕ ನಿಗದಿ ಮಾಡಲಾಗಿದೆ.
ಹರಾಜಿಗೆ ಸಂಬಂಧಿಸಿದಂತೆ ನೋಟಿಸ್ ಗಳ ಪಟ್ಟಿಯನ್ನು ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದ್ದು, ಆಸ್ತಿ ಮಾಲೀಕರು ತಕ್ಷಣವೇ ಆನ್ಲೈನ್ ಮೂಲಕ ತೆರಿಗೆ ಪಾವತಿಸಿದಲ್ಲಿ ಹರಾಜು ಪ್ರಕ್ರಿಯೆಯಿಂದ ಪಾರಾಗಬಹುದಾಗಿದೆ.

