ಮಾರುಕಟ್ಟೆಯಲ್ಲಿ ಕೋಳಿ ಮೊಟ್ಟೆ ದರ ಏರುಗತಿಯಲ್ಲಿ ಸಾಗುತ್ತಿದೆ. ಇದರೊಂದಿಗೆ ಮಾಂಸದ ಬೆಲೆ ಕೂಡ ಏರುಗತಿಯಲ್ಲಿ ಸಾಗುತ್ತಿದ್ದು ಮಾಂಸಪ್ರಿಯರಿಗೆ ದರ ಏರಿಕೆಯ ಬಿಸಿ ತಟ್ಟಿದೆ.
ಕಳೆದ 15 -20 ದಿನದಿಂದ ಮೊಟ್ಟೆಯ ದರದಲ್ಲಿ ಏರಿಕೆ ಆಗುತ್ತಿದೆ. ಕೋಲಾರ ಜಿಲ್ಲೆಯಲ್ಲಿ 600 ಕ್ಕೂ ಹೆಚ್ಚು ಮೊಟ್ಟೆ ಉತ್ಪಾದನಾ ಕೋಳಿಫಾರ್ಮ್ ಗಳಿದ್ದು, ಮಾಂಸ ಮತ್ತು ಮೊಟ್ಟೆ ಉದ್ದೇಶದಿಂದ ಪ್ರಮುಖವಾಗಿ ಕೋಳಿಗಳನ್ನು ಸಾಕಲಾಗುತ್ತಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಆಗಸ್ಟ್ ನಲ್ಲಿ ಹೋಲ್ ಸೇಲ್ 100 ಮೊಟ್ಟೆಗಳ ಸಗಟು ದರ 400 ರಿಂದ 450 ರೂ. ಇತ್ತು. ಈಗ 580 ರಿಂದ 600 ರೂ.ಗಡಿ ದಾಟಿದೆ. ಇದರಿಂದಾಗಿ ಹೋಟೆಲ್, ಬೇಕರಿ, ಡಾಬಾ, ಮಾಲೀಕರಿಗೆ ಬಿಸಿ ತಟ್ಟಿದೆ. ಅಲ್ಲದೆ ಗ್ರಾಹಕರಿಗೂ ಕೂಡ ಬೆಲೆ ಏರಿಕೆ ಬಿಸಿ ತಟ್ಟಿದೆ. ಒಂದು ಮೊಟ್ಟೆ ದರ 7ರಿಂದ 8 ರೂಪಾಯಿಗೆ ಮಾರಾಟವಾಗುತ್ತಿದ್ದು, ಒಂದು ಡಜನ್ ಮೊಟ್ಟೆ ದರ 90 ರಿಂದ 100 ರೂಪಾಯಿ ಗಡಿ ದಾಟಿದೆ.
ಹವಾಮಾನ ವೈಪರೀತ್ಯ ಸೇರಿ ಹಲವು ಕಾರಣಗಳಿಂದ ಮೊಟ್ಟೆ ಉತ್ಪಾದನೆ ಕುಂಠಿತವಾಗಿದೆ. ಚಳಿಗಾಲದಲ್ಲಿ ಮೊಟ್ಟೆ ಬೇಡಿಕೆ ಹೆಚ್ಚು ಮತ್ತು ರಫ್ತು ಹೆಚ್ಚಾಗುತ್ತದೆ. ಶಾಲೆಗಳಲ್ಲಿ ಕೂಡ ಮೊಟ್ಟೆ ವಿತರಿಸಲಾಗುತ್ತಿದ್ದು, ಬೇಡಿಕೆ ಹೆಚ್ಚಿರುವುದರಿಂದ ಅದಕ್ಕೆ ತಕ್ಕಂತೆ ಉತ್ಪಾದನೆ ಆಗುತ್ತಿಲ್ಲ. ಹೀಗಾಗಿ ಮೊಟ್ಟೆ ದರ ಏರಿಕೆಯಾಗಿದೆ.
ಫಾರ್ಮ್ ಕೋಳಿ ಮೊಟ್ಟೆಗಿಂತ ನಾಟಿ ಕೋಳಿ ಮೊಟ್ಟೆ ದರ ದುಪ್ಪಟ್ಟಾಗಿದೆ. ಫಾರ್ಮ್ ಕೋಳಿ ಮೊಟ್ಟೆಗೆ ಸಗಟು ದರ 5 ರೂ. ಇದ್ದರೆ ನಾಟಿ ಕೋಳಿ ಮೊಟ್ಟೆ ದರ 10 ರಿಂದ 12 ರೂಪಾಯಿವರೆಗೂ ಇದೆ. ಡಜನ್ ಗೆ 150 ರೂ.ವರೆಗೆ ಮಾರಾಟವಾಗ್ತಿದೆ.

