ಬೆಂಗಳೂರು: ರಾಜ್ಯದಲ್ಲಿ ಮರ್ಯಾದೆಗೇಡು ಹತ್ಯೆ ತಡೆ ಸಂಬಂಧ ಕಾನೂನು ಜಾರಿಗೊಳಿಸುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕನ್ನಡ ಹೋರಾಟಗಾರರ ಸಮಿತಿ ವತಿಯಿಂದ ಭಾನುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಜನ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಈ ವಿಚಾರ ಪ್ರಸ್ತಾಪಿಸಿದ್ದಾರೆ.
ಸಾಮಾಜಿಕ ಹೋರಾಟಗಾರ್ತಿ ಕೆ. ನೀಲಾ ಅವರು, ಅನ್ಯ ಜಾತಿ ಯುವಕನ ಮದುವೆಯಾದ ಕಾರಣಕ್ಕೆ ತಂದೆಯೊಬ್ಬರು ಗರ್ಭಿಣಿ ಪುತ್ರಿಯನ್ನೇ ಹತ್ಯೆ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಕಠಿಣ ಕಾನೂನು ಜಾರಿಗೆ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಹುಬ್ಬಳ್ಳಿ, ಚಿತ್ರದುರ್ಗ ಸೇರಿದಂತೆ ಇತರ ಕಡೆ ನಡೆದ ಮರ್ಯಾದೆಗೇಡು ಹತ್ಯೆ ವಿಚಾರ ಗಮನದಲ್ಲಿದೆ. ಇದರ ತಡೆಗೆ ಕಾನೂನು ಜಾರಿಗೊಳಿಸಲು ಒತ್ತಾಯವಿದೆ. ಕಠಿಣ ಕಾನೂನು ಜಾರಿಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ಅನ್ಯ ಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಮಾನ್ಯಾ ಪಾಟೀಲ್ ಅವರನ್ನು ಆಕೆಯ ತಂದೆಯೇ ಹತ್ಯೆ ಮಾಡಿದ್ದರು. ಗರ್ಭಿಣಿ ಪುತ್ರಿಯನ್ನೇ ಹತ್ಯೆ ಮಾಡಿದ್ದ ಈ ಪ್ರಕಾರಣ ದೇಶಾದ್ಯಂತ ಗಮನ ಸೆಳೆದಿತ್ತು.
ಮರ್ಯಾದಾ ಹತ್ಯೆ ತಡೆಯಲು ಕಾಯ್ದೆಯನ್ನು ರೂಪಿಸಿ ಜಾರಿ ಮಾಡಬೇಕೆಂಬ ಮನವಿಯನ್ನು ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ.

