ಬೆಂಗಳೂರು: ಹುದ್ದೆ ತೋರಿಸದೆ ಅಧಿಕಾರಿಗಳನ್ನು ವರ್ಗಾಯಿಸುವಂತಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠ ಮಹತ್ವದ ಆದೇಶ ನೀಡಿದೆ.
ಹುದ್ದೆ ತೋರಿಸದೆ ಅಧಿಕಾರಿಗಳನ್ನು ವರ್ಗಾಯಿಸುವಂತಿಲ್ಲ. ಇಂತಹ ಕ್ರಮಗಳಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಲಿದೆ ಎಂದು ಹೇಳಿದೆ. ಈ ರೀತಿ ವರ್ಗಾವಣೆಗಳಿಂದ ತೆರೆಗೆದಾರರು, ಸಾರ್ವಜನಿಕರ ಹಣ ದುರ್ವಿನಿಯೋಗ ಆದಂತಾಗುತ್ತದೆ. ಕೆಲಸ ಪಡೆಯದೆ ಮನೆಯಲ್ಲಿ ಕುಳಿತವರಿಗೆ ವೇತನ ನೀಡಿದಂತಾಗುತ್ತದೆ. ಹೀಗಾಗಿ ಹುದ್ದೆ ತೋರಿಸುವವರೆಗೆ ಹಿಂದಿನ ಹುದ್ದೆಯಿಂದ ಬಿಡುಗಡೆ ಮಾಡದಂತೆ ಆದೇಶಿಸಲಾಗಿದೆ.
ಹುದ್ದೆ ತೋರಿಸದೆ ವರ್ಗಾವಣೆ ಮಾಡಿದರೆ ಇಲಾಖೆಯ ಮುಖ್ಯಸ್ಥರೇ ಹೊಣೆಗಾರರಾಗುತ್ತಾರೆ. ಕಾಯುವಿಕೆ ಅವಧಿಯ ವೇತನವನ್ನು ಕಾರಣರಾದ ಅಧಿಕಾರಿಯಿಂದಲೇ ವಸೂಲು ಮಾಡಿ ಎಂದು ನ್ಯಾಯಮೂರ್ತಿಗಳಾದ ಎಸ್.ಜಿ. ಪಂಡಿತ್ ಮತ್ತು ಕೆ.ವಿ. ಅರವಿಂದ್ ಅವರಿದ್ದ ಹೈಕೋರ್ಟ್ ಪೀಠ ಆದೇಶಿಸಿದೆ.
ಅಬಕಾರಿ ಉಪ ಆಯುಕ್ತ ಕೆ. ಅರುಣ್ ಕುಮಾರ್ ಅವರನ್ನು ಹುದ್ದೆ ತೋರಿಸದೆ 2025ರ ಜನವರಿ 29ರಂದು ವರ್ಗಾವಣೆ ಮಾಡಲಾಗಿತ್ತು. ಅಂದಿನಿಂದಲೂ ಹುದ್ದೆ ಇಲ್ಲದ ಕಾರಣ ಅವರು ಪೋಸ್ಟಿಂಗ್ ಗಾಗಿ ಹೈಕೋರ್ಟ್ ಮೆಟ್ಟಿಲೇರಿ ರಿಟ್ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಈ ಆದೇಶ ನೀಡಿದೆ.

