ಬೆಂಗಳೂರು: ವೀರಶೈವ ಲಿಂಗಾಯತ ಜಂಗಮರು ಬೇಡ ಅಥವಾ ಬುಡ್ಗ ಜಂಗಮರಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ಲಿಂಗಾಯಿತರಲ್ಲಿನ ಜಂಗಮರು ತಾವು ಬೇಡ ಅಥವಾ ಬುಡ್ಗ ಜಂಗಮರೆಂದು ಹಕ್ಕು ಪ್ರತಿಪಾದಿಸಿಕೊಂಡು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ಮೀಸಲು ದುರ್ಬಳಕೆ ಮಾಡಿಕೊಳ್ಳುವುದಕ್ಕೆ ಹೈಕೋರ್ಟ್ ಪೂರ್ಣ ವಿರಾಮ ಹಾಕಿದೆ.
ಕಲಬುರಗಿ ಪೀಠದಲ್ಲಿ ಸರ್ಕಾರ ಸಲ್ಲಿಸಿದ ಮೇಲ್ಮನವಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಹಾಗೂ ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ್ ಅವರಿದ್ದ ವಿಭಾಗೀಯ ಪೀಠದಿಂದ ಮಹತ್ವದ ಆದೇಶ ನೀಡಲಾಗಿದೆ. ಈ ತೀರ್ಪಿನಿಂದಾಗಿ ಜಂಗಮರು ಪರಿಶಿಷ್ಟ ಜಾತಿಯಲ್ಲಿ ತಮಗೂ ಪ್ರತ್ಯೇಕ ಒಳಮಿಸಲು ಬೇಕು ಎಂದು ಮುಂದಿಟ್ಟಿದ್ದ ಬೇಡಿಕೆಗೆ ಹಿನ್ನಡೆಯಾಗಲಿದೆ. ಲಿಂಗಾಯಿತರಲ್ಲಿನ ಜಂಗಮರು ಸಮಾಜದ ಉನ್ನತ ವರ್ಗಕ್ಕೆ ಸೇರಿದ್ದು ಅವರು ಪೂಜ್ಯ ವರ್ಗ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ವೀರಶೈವರಲ್ಲಿನ ಜಂಗಮ ವರ್ಗದ ವೃತ್ತಾಂತ, ಬೇಡ ಮತ್ತು ಬುಡ್ಗ ಜಂಗಮರ ಇತಿಹಾಸವನ್ನು ತೀರ್ಪಿನಲ್ಲಿ ಪ್ರಸ್ತಾಪಿಸಿರುವ ಹೈಕೋರ್ಟ್, ಇತಿಹಾಸ ತಜ್ಞ ಬಿ.ಎಲ್. ರೈಸ್ ಮತ್ತು ಮಾನವಶಾಸ್ತ್ರಜ್ಞರ ದಾಖಲೆಗಳನ್ನು ಉಲ್ಲೇಖಿಸಿ ಲಿಂಗಾಯಿತರಲ್ಲಿನ ಜಂಗಮರೇ ಬೇರೆ, ಬುಡ್ಗ ಅಥವಾ ಬೇಡ ಜಂಗಮರೇ ಬೇರೆ ಎಂದು ಸ್ಪಷ್ಟಪಡಿಸಿದೆ.