ಮುನಿರಾಬಾದ್: ತುಂಗಭದ್ರಾ ಜಲಾಶಯದಲ್ಲಿ ಹೊಸದಾಗಿ ಎಲ್ಲಾ 33 ಕ್ರಸ್ಟ್ ಗೇಟ್ ಗಳ ಅಳವಡಿಕೆ ಕಾರ್ಯ ಶನಿವಾರ ಪೂರ್ಣಗೊಂಡಿದೆ.
2024ರ ಆಗಸ್ಟ್ 10ರಂದು ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಂಡಿ ಕಳಚಿ ಅಪಾರ ಪ್ರಮಾಣದ ನೀರು ಪೋಲಾಗಿತ್ತು. 19ನೇ ಕ್ರಸ್ಟ್ ಗೇಟ್ ಸೇರಿದಂತೆ ಎಲ್ಲಾ 33 ಕ್ರಸ್ಟ್ ಗೇಟ್ ಗಳನ್ನು ಹೊಸದಾಗಿ ಅಳವಡಿಸುವ ಕಾರ್ಯ 2025ರ ಡಿಸೆಂಬರ್ 24 ರಿಂದ ಆರಂಭವಾಗಿತ್ತು. ಅನೇಕ ಸವಾಲುಗಳ ನಡುವೆಯೂ 121 ದಿನಗಳ ನಿರಂತರ ಕೆಲಸ ನಿರ್ವಹಿಸುವ ಮೂಲಕ 33 ಕ್ರಸ್ಟ್ ಗೇಟ್ ಗಳನ್ನು ಅಳವಡಿಸಲಾಗಿದೆ. ಗೇಟ್ ಗಳ ಅಳವಡಿಕೆಗೆ ತಜ್ಞರು, ಅಧಿಕಾರಿಗಳು, ಕಾರ್ಮಿಕರು ಶ್ರಮಿಸಿದ್ದರು. ವೆಲ್ಡಿಂಗ್ ಮತ್ತು ಪೇಂಟಿಂಗ್ ಸೇರಿ ಸಣ್ಣಪುಟ್ಟ ಕೆಲಸಗಳನ್ನು ಮೇ 15ರೊಳಗೆ ಮುಗಿಸುವ ವಿಶ್ವಾಸವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
19ನೇ ಕ್ರಸ್ಟ್ ಗೇಟ್ ನೀರಿನ ರಭಸಕ್ಕೆ ಕಿತ್ತು ಹೋಗಿದ್ದ ಸಂದರ್ಭದಲ್ಲಿ ಜಲಾಶಯ ಗೇಟ್ ತಜ್ಞ ಕನ್ನಯ್ಯ ನಾಯ್ಡು ಅವರನ್ನು ಕರೆಸಿ ಸ್ಟಾಪ್ ಲಾಕ್ ಅಳವಡಿಸಿ ಪೋಲಾಗುತ್ತಿದ್ದ ನೀರನ್ನು ತಡೆಯಲಾಗಿತ್ತು. ಹೊಸ ಗೇಟ್ ಅಳವಡಿಕೆ ಕಾರ್ಯಕ್ಕೆ ಮೂರು ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು. ಒಂದು ತಂಡ ಗೇಟ್ ನಿರ್ಮಾಣ, ಮತ್ತೊಂದು ತಂಡ ಹಳೇ ಗೇಟ್ ತೆರವು ಕಾರ್ಯಾಚರಣೆ, ಮೂರನೇ ತಂಡ ನೂತನ ಗೇಟ್ ಗಳ ಅಳವಡಿಕೆ ಕಾರ್ಯ ಕೈಗೊಂಡಿದ್ದು, ಸಂಘಟಿತ ಪ್ರಯತ್ನದಿಂದ ಎಲ್ಲಾ 33 ಗೇಟ್ ಗಳ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ.

