ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರವಾಗಿ ವಿಪಕ್ಷ ನಾಯಕರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಭಾನುವಾರ ಸರ್ವ ಪಕ್ಷ ಸಭೆ ನಡೆಯಲಿದೆ.
ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸರ್ವ ಪಕ್ಷ ಸಭೆ ನಡೆಸಲಾಗುವುದು. ಮಳೆ ಕೊರತೆಯಿಂದ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು, ಇಂತಹ ಸಂಕಷ್ಟದ ಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಕೊಡುವುದು ಅಸಾಧ್ಯವೆಂದು ರಾಜ್ಯ ಸರ್ಕಾರ ಹೇಳಿದೆ.
ತಮಿಳುನಾಡಿಗೆ ಪ್ರತಿದಿನ 3500 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿ ಆದೇಶಿಸಿದೆ. ಈ ಆದೇಶವನ್ನು ಪಾಲಿಸಬೇಕೆ ಅಥವಾ ತಿರಸ್ಕರಿಸಬೇಕೆ ಮತ್ತು ರಾಜ್ಯದ ಮುಂದಿರುವ ಆಯ್ಕೆಗಳ ಕುರಿತಾಗಿ ಚರ್ಚಿಸಲು ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ ದಲ್ಲಿ ಇಂದು ಸರ್ವ ಪಕ್ಷ ಸಭೆ ನಡೆಸಲಾಗುವುದು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿ ಆದೇಶ ಪಾಲಿಸದಿದ್ದರೆ ಮುಂದೆ ಎದುರಾಗುವ ಸಮಸ್ಯೆ ಹಾಗೂ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವುದು, ಯಾವೆಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಬೇಕು ಎನ್ನುವ ಬಗ್ಗೆಯೂ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು.
ಸಭೆಯಲ್ಲಿ ಕೇಂದ್ರ ಸಚಿವರು, ಕಾವೇರಿ ನದಿ ಭಾಗದ ಶಾಸಕರು, ಸಚಿವರು ಹಾಗೂ ವಿಪಕ್ಷ ನಾಯಕರು ಭಾಗವಹಿಸಲಿದ್ದಾರೆ.

