ಬೆಂಗಳೂರು: ಬೆಂಗಳೂರು -ಮೈಸೂರು ನಡುವೆ 111 ಕಿಲೋಮೀಟರ್ ಉದ್ದದ ಎಕ್ಸ್ಪ್ರೆಸ್ ವೇ ನಿರ್ಮಾಣಕ್ಕೆ ನಂದಿ ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪ್ರೈಸಸ್ ಲಿಮಿಟೆಡ್(ನೈಸ್)ಗೆ ನೀಡಲು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ(ಕೆಐಎಡಿಬಿ) ವಶಪಸಿಕೊಂಡಿದ್ದ ಸುಮಾರು 3 ಎಕರೆಗೂ ಹೆಚ್ಚು ಜಮೀನಿನ ಭೂಸ್ವಾಧೀನ ಪ್ರಕ್ರಿಯೆಯನ್ನು ರಾಜ್ಯ ಹೈಕೋರ್ಟ್ ರದ್ದುಪಡಿಸಿದೆ.
ಭೂ ಸ್ವಾಧೀನ ಅಧಿಸೂಚನೆಯನ್ನು ಪ್ರಶ್ನಿಸಿ ಪಿ. ಶ್ರೀಧರಮೂರ್ತಿ ಸೇರಿದಂತೆ 50ಕ್ಕೂ ಹೆಚ್ಚು ಭೂ ಮಾಲೀಕರು ಪ್ರತ್ಯೇಕ ರಿಟ್ ಅರ್ಜಿಗಳನ್ನು ಸಲ್ಲಿಸಿದ್ದು, ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಏಕ ಸದಸ್ಯ ಪೀಠದಿಂದ ಈ ಆದೇಶ ನೀಡಲಾಗಿದೆ.
ಉದ್ದೇಶಿತ ಯೋಜನೆಗೆ ಜಮೀನು ಭೂಸ್ವಾಧೀನ ಪ್ರಕ್ರಿಯೆ ನಡೆಸಿ 23 ವರ್ಷಗಳಾದರೂ ಅಂತಿಮ ಆದೇಶ ಹೊರಡಿಸಿಲ್ಲ. ನಿಗದಿತ ಉದ್ದೇಶಕ್ಕೆ ಭೂಮಿ ಬಳಕೆ ಮಾಡಿಕೊಂಡಿಲ್ಲ. ಇದರಿಂದ ಕೃಷಿ ಕೆಲಸ ಮಾಡುವ ಭೂಮಾಲೀಕರ ಜೀವನಕ್ಕೆ ತೊಂದರೆಯಾಗಿದೆ. ರಾಜ್ಯ ಹೈಕೋರ್ಟ್ ವಿಭಾಗೀಯ ಪೀಠ ಮತ್ತು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಆಧಾರದ ಮೇಲೆ ಭೂಸ್ವಾಧೀನ ರದ್ದು ಪಡಿಸಲಾಗಿದೆ ಎಂದು ಹೈಕೋರ್ಟ್ ತಿಳಿಸಿದೆ.