ಬೆಂಗಳೂರು: ಕೇಂದ್ರ ಸರ್ಕಾರದ ಜನಗಣತಿ ಭಾಗವಾಗಿ ರಾಜ್ಯದಲ್ಲಿ ಏಪ್ರಿಲ್ 1ರಿಂದ ಆರಂಭವಾಗಿದ್ದ ಸ್ವಯಂ ಗಣತಿ ಏಪ್ರಿಲ್ 15ಕ್ಕೆ ಮುಕ್ತಾಯವಾಗಲಿದೆ. ಏಪ್ರಿಲ್ 16ರಿಂದ ಒಂದು ತಿಂಗಳ ಕಾಲ ಮನೆ ಗಣತಿ ಮತ್ತು ಮನೆಗಳ ಪಟ್ಟಿ ಸಿದ್ಧಪಡಿಸಲಾಗುವುದು. ಗಣತಿದಾರರು ಮನೆಮನೆಗೆ ತೆರಳಿ ಮನೆಯ ಸ್ಥಿತಿಗತಿ, ಮೂಲ ಸೌಕರ್ಯ, ಆಸ್ತಿಗಳು ಮತ್ತಿತರ ವಿವರ ಕಲೆ ಹಾಕಲಿದ್ದಾರೆ.
16 ವರ್ಷಗಳ ನಂತರ ದೇಶದಲ್ಲಿ ಜನಗಣತಿ ನಡೆಯುತ್ತಿದೆ. ಮನೆಗಳ ಪಟ್ಟಿ ತಯಾರಿಕೆ ಮತ್ತು ವಸತಿ ಗಣತಿಯು ಜನಗಣತಿಯ ಮೊದಲ ಹಂತವಾಗಿದ್ದು, ವಿವಿಧ ಕೇಂದ್ರಾಡಳಿತ ಪ್ರದೇಶಗಳು ಕರ್ನಾಟಕ ಸೇರಿದಂತೆ ಏಳು ರಾಜ್ಯಗಳಲ್ಲಿ ಸೆಪ್ಟೆಂಬರ್ 30ರವರೆಗೆ ಗಣತಿ ನಡೆಯಲಿದೆ.
ರಾಜ್ಯದಲ್ಲಿ ಏಪ್ರಿಲ್ 16ರಿಂದ ಮೇ 15ರವರೆಗೆ ಗಣತಿ ಕಾರ್ಯ ನಡೆಯಲಿದ್ದು, ಎರಡು ಲಕ್ಷಕ್ಕೂ ಹೆಚ್ಚು ಗಣತಿದಾರರನ್ನು ನಿಯೋಜಿಸಲಾಗಿದೆ. ಎಲ್ಲ 31 ಜಿಲ್ಲೆಗಳಲ್ಲಿ ಜಿಲ್ಲಾಡಳಿತಗಳ ಮೂಲಕ ಗಣತಿ ಕಾರ್ಯ ನಡೆಯಲಿದೆ. ಮೊದಲ ಹಂತದಲ್ಲಿ ಜನಗಣತಿಗೆ 33 ಪ್ರಶ್ನೆ ಸೇರಿಸಲಾಗಿದೆ.
ಗಣತಿಯ ಸಂದರ್ಭದಲ್ಲಿ ಸಂಗ್ರಹಿಸುವ ಎಲ್ಲಾ ವೈಯಕ್ತಿಕ ದತ್ತಾಂಶಗಳ ಗೌಪ್ಯತೆ ಕಾಪಾಡಲಾಗುವುದು. ಇದನ್ನು ಮಾಹಿತಿ ಹಕ್ಕು ಕಾಯ್ದೆಯಡಿ ನೀಡುವುದಿಲ್ಲ. ನ್ಯಾಯಾಲಯದಲ್ಲಿ ಸಾಕ್ಷಿಯಾಗಿ ಬಳಸುವುದಿಲ್ಲ. ಯಾವುದೇ ಸಂಸ್ಥೆಯೊಂದಿಗೆ ಹಂಚಿಕೊಳ್ಳುವುದಿಲ್ಲ. ದತ್ತಾಂಶ ದುರುಪಯೋಗ ಬಗ್ಗೆ ಜನ ಭಯಪಡುವುದು ಬೇಡ. ಜನರು ತಪ್ಪದೆ ಗಣತಿಯಲ್ಲಿ ಪಾಲ್ಗೊಂಡು ಗಣತಿದಾರರು ಕೇಳುವ ಪ್ರಶ್ನೆಗಳಿಗೆ ನಿಖರವಾದ ಮಾಹಿತಿ ನೀಡಬೇಕು. ಮುಂದಿನ ವರ್ಷ ಫೆಬ್ರವರಿಯಲ್ಲಿ ಎರಡನೇ ಹಂತದ ಎಣಿಕೆ ನಡೆಯಲಿದೆ. ಆಗ ಜನಸಂಖ್ಯೆ ಎಣಿಕೆ ಮಾಡಲಾಗುವುದು. ಪ್ರತಿ ವ್ಯಕ್ತಿಯ ಜಾತಿ, ಸಾಮಾಜಿಕ, ಆರ್ಥಿಕ ವಿವರಗಳನ್ನು ಸಂಗ್ರಹಿಸಲಾಗುವುದು.

