ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು ನಡೆಯಲಿದೆ. 121 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಒಟ್ಟು 1314 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ನವೆಂಬರ್ 11ರಂದು ಎರಡನೇ ಹಂತದ ಮತದಾನ ನಡೆಯಲಿದ್ದು, ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ.. 18 ಜಿಲ್ಲೆಗಳ 121 ಕ್ಷೇತ್ರಗಳ 3.75 ಕೋಟಿ ಮತದಾರರು ಇಂದು ಅಭ್ಯರ್ಥಿಗಳ ಹಣೆಬರಹ ತೀರ್ಮಾನಿಸಲಿದ್ದಾರೆ. ಉಪಮುಖ್ಯಮಂತ್ರಿ, ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ, ಆರ್.ಜೆ.ಡಿ. ನಾಯಕ, ವಿಪಕ್ಷ ನಾಯಕ ತೇಜಸ್ವಿ ಯಾದವ್, ಲಾಲು ಯಾದವ್ ಅವರ ಹಿರಿಯ ಪುತ್ರ ಜನಶಕ್ತಿ ಜನತಾ ದಳದ ತೇಜ್ ಪ್ರತಾಪ್ ಯಾದವ್ ಕಣದಲ್ಲಿದ್ದಾರೆ.
ಮೊದಲ ಹಂತದ ಅಭ್ಯರ್ಥಿಗಳ ಪೈಕಿ ಶೇಕಡ 36 ರಷ್ಟು ಮಂದಿಯ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ. ಪಾಟ್ನಾ, ನಳಂದ, ವೈಶಾಲಿ, ಮುಜಫ್ಫರ್ ಪುರ, ಮಾಧೇಪುರ ಸೇರಿ ಹಲವು ಜಿಲ್ಲೆಗಳ 45,341 ಬೂತ್ ಗಳಲ್ಲಿ ಮತದಾನ ನಡೆಯಲಿದೆ. 1.98 ಕೋಟಿ ಪುರುಷರು, 758 ತೃತೀಯ ಲಿಂಗಿಗಳು ಸೇರಿ 3.75 ಕೋಟಿ ಮತದಾರರು ಮತದಾನ ಮಾಡಲಿದ್ದಾರೆ.
