ಹುಣಸೂರು: ಡಿಸೆಂಬರ್ 15 ರಿಂದ ರಾಜ್ಯಾದ್ಯಂತ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಆರಂಭವಾಗಲಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಹುಣಸೂರು ನಗರದಲ್ಲಿ ದೇವರಾಜ ಅರಸು ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಸಚಿವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ರಸ್ತೆ ಗುಂಡಿಗಳ ಕುರಿತಾಗಿ ಎದುರಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಅಕ್ಟೋಬರ್ 1ರಿಂದ ಕಾಮಗಾರಿ ಆರಂಭವಾಗಬೇಕಿತ್ತು. ಹವಾಮಾನ ವೈಪರೀತ್ಯದಿಂದ ಸತತ ಮಳೆ ಆಗುತ್ತಿದೆ. ಈಗಾಗಲೇ ರಸ್ತೆ ಗುಂಡಿ ಮುಚ್ಚಲು ಮತ್ತು ರಸ್ತೆ ಅಭಿವೃದ್ಧಿಪಡಿಸಲು ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಕೂಡ ಆಗಿದೆ. ರಾಜ್ಯಾದ್ಯಂತ ಡಿಸೆಂಬರ್ 15 ರಿಂದ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
