ಬೆಂಗಳೂರು: ರಾಜ್ಯದ ಸರ್ಕಾರಿ/ಅನುದಾನಿತ/ಅನುದಾನ ರಹಿತ ಶಾಲೆಗಳಲ್ಲಿ ಅಶ್ಲೀಲ ಹಾಡುಗಳಿಗೆ ಮಕ್ಕಳಿಂದ ನೃತ್ಯ ಮಾಡಿಸುತ್ತಿರುವುದನ್ನು ನಿರ್ಬಂಧಿಸುವ ಕುರಿತು ಶಿಕ್ಷಣ ಇಲಾಖೆ ಆದೇಶಿಸಿದೆ.
ಶಾಲೆಯು ಮಕ್ಕಳಿಗೆ ಜ್ಞಾನ ದೇಗುಲವಿದ್ದಂತೆ. ಪ್ರತಿ ಮಗುವಿನ ಬೆಳವಣಿಗೆ, ಸಂಸ್ಕಾರ, ವಿನಯತೆ, ಒಳ್ಳೆಯ ನಡತೆ, ಮಾನಸಿಕ ಸ್ಥಿತಿ, ಆರೋಗ್ಯ, ನೈತಿಕ ಮೌಲ್ಯಗಳು, ಮಗುವಿನ ಭವಿಷ್ಯದ ನಿರ್ಮಾಣ ಶಾಲೆಯಿಂದಲೇ ಪ್ರಾರಂಭವಾಗುವುದು ಹಾಗೂ ಶಾಲೆಯಿಂದಲೇ ಮಕ್ಕಳಿಗೆ ಒಂದು ಉತ್ತಮ ಭವಿಷ್ಯ ನಿರ್ಮಾಣವಾಗುವುದು.
ಶಾಲೆಯಲ್ಲಿ ಕಲಿಸಿದ ಉತ್ತಮ ಶಿಕ್ಷಣದಿಂದಾಗಿ, ಇಂದಿನ ಮಕ್ಕಳೇ ನಾಳಿನ ಉತ್ತಮ ಪ್ರಜೆಗಳಾಗುವರು. ಅಂತಹ ವಿದ್ಯಾರ್ಥಿಗಳಿಂದ ಶಾಲೆಗಳಲ್ಲಿ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವಾಗ ಕೆಲವು ವೇಳೆ ಅಶ್ಲೀಲ ಹಾಡುಗಳು ಮತ್ತು ನೃತ್ಯಗಳನ್ನು ಪ್ರದರ್ಶಿಸಲಾಗುತ್ತಿದೆ. ಈ ರೀತಿ ನೃತ್ಯಗಳನ್ನು ಪ್ರದರ್ಶಿಸಿದರೆ ಮಕ್ಕಳ/ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ನೈತಿಕ ಮೌಲ್ಯಗಳ ಮೇಲೆ ಕೆಟ್ಟ ಪರಿಣಾಮ ಬೀರಿದಂತಾಗುತ್ತದೆ ಹಾಗೂ ಅಶಿಸ್ತು ಮೂಡಿಸಿದಂತಾಗುತ್ತದೆ ಹಾಗೂ ಶಿಕ್ಷಣದ ಪ್ರಾವಿತ್ರ್ಯತೆಗೆ ಧಕ್ಕೆ ಉಂಟುಮಾಡಿದಂತಾಗುತ್ತದೆ.
ಆದ್ದರಿಂದ ರಾಜ್ಯದ ಎಲ್ಲಾ ಸರ್ಕಾರಿ/ಅನುದಾನಿತ/ಅನುದಾನ ರಹಿತ ಶಾಲೆಗಳಲ್ಲಿ ಮಕ್ಕಳಿಂದ/ವಿದ್ಯಾರ್ಥಿಗಳಿಂದ ಅಶ್ಲೀಲ ಹಾಡುಗಳಿಗೆ ನೃತ್ಯ ಮಾಡಿಸುತ್ತಿರುವುದನ್ನು ನಿರ್ಬಂಧಿಸಲು ರಾಜ್ಯದ ಎಲ್ಲಾ ಉಪನಿರ್ದೇಶಕರು(ಆಡಳಿತ) ಶಾಲಾ ಶಿಕ್ಷಣ ಇಲಾಖೆ ರವರು ಈ ಕೆಳಕಂಡಂತೆ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದೆ. ಒಂದು ವೇಳೆ ಅಶ್ಲೀಲ ಹಾಡುಗಳಿಗೆ ಮಕ್ಕಳಿಂದ ನೃತ್ಯ ಮಾಡಿಸುವುದು ಕಂಡು ಬಂದಲ್ಲಿ ಅಂತಹ ಶಾಲಾ ಮುಖ್ಯ ಶಿಕ್ಷಕರು/ಆಡಳಿತ ಮಂಡಳಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಿದೆ.
1. ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವಾಗ ಮಕ್ಕಳಿಂದ ಅಶ್ಲೀಲ ಹಾಡುಗಳಿಗೆ ನೃತ್ಯಗಳನ್ನು ಮಾಡಿಸುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸುವುದು.
2. ಮಕ್ಕಳಿಗೆ ಸ್ಫೂರ್ತಿದಾಯಕ/ಸಕಾರಾತ್ಮಕ /ರಾಷ್ಟ್ರಾಭಿಮಾನ ಮೂಡಿಸುವ ಹಾಗೂ ಕನ್ನಡ ನಾಡಿನ ಹಿರಿಮೆ, ಗರಿಮೆ, ಮೌಲ್ಯಾಧಾರಿತ, ಸಂಸ್ಕಾರ, ನೈತಿಕತೆ, ಇರುವಂತಹ ಹಾಡುಗಳನ್ನು ಆಯ್ಕೆ ಮಾಡುವುದು.
3. ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಮತ್ತು ನೈತಿಕ ಮೌಲ್ಯಗಳನ್ನು ಬೆಳಸುವಂತಹ ಹಾಡುಗಳನ್ನು ಆಯ್ಕೆ ಮಾಡುವುದು.
4. ಹಾಡುಗಳ ಮತ್ತು ನೃತ್ಯಗಳ ಆಯ್ಕೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿ ಜವಾಬ್ದಾರಿಯನ್ನು ನಿಭಾಯಿಸುವುದು.
5. ಮಕ್ಕಳು/ವಿದ್ಯಾರ್ಥಿಗಳು ನೃತ್ಯ ಕಾರ್ಯಕ್ರಮಗಳಲ್ಲಿ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಭ್ಯ ಉಡುಪುಗಳನ್ನು ಧರಿಸಲು ಕ್ರಮವಹಿಸುವುದು.


