ನವದೆಹಲಿ: ಜಿಎಸ್‌ಟಿ ಮರುವರ್ಗೀಕರಣದಿಂದ ರಾಜ್ಯಗಳಿಗೆ ತೆರಿಗೆ ನಷ್ಟವಾಗಲಿದ್ದು, ಇದಕ್ಕೆ ಪರಿಹಾರ ನೀಡಬೇಕೆಂಬ ರಾಜ್ಯಗಳ ಬೇಡಿಕೆಯನ್ನು ಕೇಂದ್ರ ಸರ್ಕಾರ ಪರಿಗಣಿಸಿಲ್ಲ.
ನಷ್ಟ ಪರಿಹಾರದ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಭರವಸೆ ನೀಡಿಲ್ಲ. ಬದಲಾಗಿ ಆದಾಯ ನಷ್ಟ ಎಂಬ ಪದವೇ ತಪ್ಪಾಗಿದೆ. ಜಿಎಸ್‌ಟಿ ಮಂಡಳಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿವೆ. ಕೇಂದ್ರದ ಪಾಲು ಮೂರರಲ್ಲಿ ಒಂದರಷ್ಟಾಗಿದೆ. ರಾಜ್ಯದ ಪಾಲು ಮೂರನೇ ಎರಡರಷ್ಟು ಇದೆ. ಲಾಭ, ನಷ್ಟಗಳು ಸಮನಾಗಿ ಹಂಚಿಕೆಯಾಗಲಿದೆ. ಹೀಗಿರುವಾಗ ತೆರಿಗೆ ಸ್ಲ್ಯಾಬ್ ಪರಿಷ್ಕರಣೆಗೆ ಸರ್ವಾನುಮತದಿಂದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಜಿಎಸ್‌ಟಿ, ತೆರಿಗೆ ಸ್ಲ್ಯಾಬ್ ಕಡಿತದಿಂದ ರಾಜ್ಯಕ್ಕೆ ವಾರ್ಷಿಕ 15 ಸಾವಿರ ಕೋಟಿ ರೂ. ನಷ್ಟವಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಜಿಎಸ್‌ಟಿ ಸಭೆಯಲ್ಲಿಯೂ ಸಚಿವ ಕೃಷ್ಣ ಬೈರೇಗೌಡ ರಾಜ್ಯಕ್ಕೆ ಆಗುವ ನಷ್ಟದ ಬಗ್ಗೆ ಪ್ರಸ್ತಾಪಿಸಿ ಪರಿಹಾರ ನೀಡುವಂತೆ ಒತ್ತಾಯಿಸಿದ್ದರು.
ಹೊಸ ಜಿಎಸ್‌ಟಿ ಜಾರಿಯಿಂದ ಕೇಂದ್ರ ಮತ್ತು ರಾಜ್ಯಗಳಿಗೆ 48000 ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗದೆ ಉಳಿಯುತ್ತದೆ. ಆದರೆ, ಇದನ್ನು ನಷ್ಟ ಎನ್ನುವುದು ಸರಿಯಲ್ಲ ಎಂದು ಕಂದಾಯ ಕಾರ್ಯದರ್ಶಿ ಅರವಿಂದ್ ಶ್ರೀವಾಸ್ತವ್ ಹೇಳಿದ್ದಾರೆ.