ಬೆಂಗಳೂರು: ಬಿಡದಿ ಟೌನ್ ಶಿಪ್ ವಿಚಾರವಾಗಿ ಆಡಳಿತಾರೂಢ ಕಾಂಗ್ರೆಸ್ ನಾಯಕರು ಹಾಗೂ ಜೆಡಿಎಸ್ ನಾಯಕರ ನಡುವಿನ ವಾಕ್ಸಮರ ಮುಂದುವರೆದಿದೆ. ಸರ್ಜಾಪುರ, ಚಿಕ್ಕಬಳ್ಳಾಪುರ, ಜಂಗಮಕೋಟೆ, ದೊಡ್ಡಬಳ್ಳಾಪುರದಲ್ಲಿ ವಿವಿಧ ಯೋಜನೆಗಳಿಗೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಇನ್ನು ಹಾಸನದಲ್ಲಿ ಕೇಂದ್ರದಿಂದ ಮಂಜೂರಾಗುವ ಮುನ್ನವೇ ಐಐಟಿ ಕಾಲೇಜಿಗಾಗಿ 1800 ಎಕರೆ ಭೂಸ್ವಾಧೀನ ಮಾಡಿದ್ದಾರೆ. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಅವರು ಇಲ್ಲೆಲ್ಲೂ ಮಾಡದ ಹೋರಾಟವನ್ನು ಬಿಡದಿಯಲ್ಲಿ ಮಾತ್ರ ಯಾಕೆ ಮಾಡುತ್ತಿದ್ದಾರೆ? ಎಂದು ಮಾಗಡಿ ಶಾಸಕರಾದ ಬಾಲಕೃಷ್ಣ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಬಿಡದಿ ಟೌನ್ ಶಿಪ್ ವಿಚಾರವಾಗಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಬಾಲಕೃಷ್ಣ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚೆಗೆ ದಿನಾಂಕ ಸಮಯ ನಿಗದಿ ಮಾಡಿದ ಬಳಿಕ ಕುಮಾರಸ್ವಾಮಿ ಅವರು ಬೈರಮಂಗಲಕ್ಕೆ ಬನ್ನಿ ಎಂದು ಹೇಳುತ್ತಿದ್ದಾರೆ ಎಂದು ಕೇಳಿದಾಗ, “ಇದನ್ನೇ ನಾನು ಬಾಲಿಶ ವರ್ತನೆ ಎಂದು ಹೇಳುವುದು. ಪ್ರಬುದ್ಧ ನಾಯಕರಿಗೆ ಇರಬೇಕಾದ ಕನಿಷ್ಠ ಜ್ಞಾನ ಕುಮಾರಣ್ಣ ಅವರಿಗಿಲ್ಲ. ಸಿಎಂ ಅಲ್ಲಿಗೆ ಬಂದರೆ ಅವರ ಕಡೆ ರೈತರು, ಇವರ ಕಡೆ ರೈತರು ಬರುತ್ತಾರೆ. ಜನ ಹೆಚ್ಚಾಗಿ ಸೇರುತ್ತಾರೆ. ಎರಡು ಕಡೆಯವರ ಮಧ್ಯೆ ಮಾರಾಮಾರಿ ನಡೆದರೆ ಯಾರು ಹೊಣೆ? ಬಿಡದಿ ಟೌನ್ ಶಿಪ್ ವಿಚಾರದಲ್ಲಿ ರೈತರ ಹೋರಾಟ ಮುಗಿದು, ಈಗ ರಾಜಕೀಯ ಆಯಾಮ ತೆಗೆದುಕೊಂಡಿದೆ. ರಾಜಕೀಯ ವಿಚಾರ ಎಂದಾಗ ಪಕ್ಷದ ಕಾರ್ಯಕರ್ತರು ಸೇರುತ್ತಾರೆ. ಇದು ಹಿರಿಯ ನಾಯಕರಿಗೆ ಇರಬೇಕಾದ ಕನಿಷ್ಠ ಜ್ಞಾನ” ಎಂದು ಕಿಡಿಕಾರಿದರು.
ಅಲ್ಲಿ ಗಲಾಟೆಯಾದರೆ ಕಾನೂನು ಸುವ್ಯವಸ್ಥೆ ಸರಿ ಇಲ್ಲ ಎಂದು ನಮ್ಮ ತಲೆಗೆ ಕಟ್ಟುವ ಉದ್ದೇಶದಿಂದ ಕುಮಾರಸ್ವಾಮಿ ಅವರು ಅಲ್ಲಿಗೆ ಕರೆಯುತ್ತಿದ್ದಾರೆ. ನಿಮಗೆ ಸತ್ಯಾಸತ್ಯತೆ ಜನರ ಮುಂದೆ ಇಡುವುದೇ ನಿಮ್ಮ ಉದ್ದೇಶವಾಗಿದ್ದರೆ ಮಾಧ್ಯಮ ವೇದಿಕೆಗಳ ಮುಂದೆ ಬನ್ನಿ. ಕುಮಾರಸ್ವಾಮಿ ಹಾಗೂ ನಿಖಿಲ್ ಅವರು ಕುಮಾರಸ್ವಾಮಿ ಅವರು ಯಾಕೆ ಬಿಡದಿಯಲ್ಲಿ ಮಾತ್ರ ಪ್ರತಿಭಟನೆ ಮಾಡುತ್ತಿದ್ದಾರೆ? ಬಿಡದಿಯಲ್ಲಿರುವ ನಿಮ್ಮ 35 ಎಕರೆ ಜಾಗ ಉಳಿಸಿಕೊಳ್ಳಲು ಇಲ್ಲಿ ಹೋರಾಟ ಮಾಡುತ್ತಿದ್ದೀರಾ? ಬೇರೆ ಭಾಗದಲ್ಲಿ ಯಾಕೆ ಹೋರಾಟ ಮಾಡುತ್ತಿಲ್ಲ? ನಿಮ್ಮ ತಂದೆ ಹಾಗೂ ಅಣ್ಣನವರು ಹಾಸನದಲ್ಲಿ ಸ್ವಾಧೀನಪಡಿಸಿರುವ ಭೂಮಿಯನ್ನು ಬಿಡಿಸಿ ನೋಡೋಣ. ಬೇರೆ ಭಾಗದಲ್ಲಿರುವವರು ರೈತರಲ್ಲವೇ? ಅದನ್ನು ಬಿಟ್ಟು ಶಿವಕುಮಾರ್ ಸಿಎಂ ಆಗಿದ್ದಾರೆ, ಅವರಿಗೆ ಮಸಿ ಬಳಿಯಬೇಕು ಎಂದು ಪ್ರಯತ್ನಿಸುತ್ತಿದ್ದೀರಾ? ಎಂದು ಪ್ರಶ್ನಿಸಿದರು.
ಹಣ ಕೊಟ್ಟು ಜನರನ್ನು ಕರೆಸಿ ಪ್ರತಿಭಟನೆ:
ಕುಮಾರಸ್ವಾಮಿ ಅವರು ರೈತರೊಂದಿಗೆ ಹೋರಾಟ ಮಾಡಿದರೆ ನಾವು ಸ್ವಾಗತಿಸುತ್ತೇವೆ. ಆದರೆ ಮೈಸೂರು, ಮಂಡ್ಯ, ಹಾರೋಹಳ್ಳಿಯಿಂದ ಜನರಿಗೆ ದುಡ್ಡುಕೊಟ್ಟು ಕರೆದುಕೊಂಡು ಬಂದು ಪ್ರತಿಭಟನೆ ಮಾಡಿಸುತ್ತಿದ್ದಾರೆ. ಇದನ್ನು ಹೋರಾಟ ಎಂದು ಹೇಳಲು ಆಗುತ್ತದೆಯೇ? ಅಲ್ಲಿ ಹೋರಾಟ ಮಾಡುತ್ತಿರುವ ರೈತರೇ ರಾಜಕೀಯದವರು ಬಂದು ಈ ಹೋರಾಟ ದಿಕ್ಕು ತಪ್ಪಿಸಿದರು ಎಂದು ಎಂದು ಹೇಳುತ್ತಿದ್ದಾರೆ. ಕುಮಾರಸ್ವಾಮಿ ಅವರು 2 ಬಾರಿ ಸಿಎಂ ಆಗಿದ್ದವರು, ಕೇಂದ್ರ ಮಂತ್ರಿಯಾಗಿರುವವರು. ಮೋದಿ ಅವರು ಕುಮಾರಸ್ವಾಮಿ ಅವರಿಗೆ ಬಿಡದಿಯಲ್ಲೇ ವಾಸ್ತವ್ಯ ಹೂಡು ಎಂದು ಹೇಳಿ ಕಳುಹಿಸಿದ್ದಾರಾ? ಕೇಂದ್ರ ಸಚಿವರಾಗಿ ಬೇರೆ ರಾಜ್ಯಗಳಿಗೆ ಹೋಗಿದ್ದು, ಇಲಾಖೆಗಳ ಬಗ್ಗೆ ಸಭೆ ಮಾಡದೇ ಬೆಳಗಾದರೆ ಬಿಡದಿಗೆ ಬರುತ್ತಿದ್ದಾರೆ. ಜೆಪಿ ಭವನ, ಬಿಡದಿ ನಿವಾಸ ಬಿಟ್ಟು ಕುಮಾರಸ್ವಾಮಿ ಬೇರೆ ಕಡೆ ಕದಲುತ್ತಿಲ್ಲ. ಈ ರಾಜ್ಯದ ಜ್ವಲಂತ ಸಮಸ್ಯೆಗಳಿದ್ದು, ಮೇಕೆದಾಟು, ಮಹದಾಯಿ ಯೋಜನೆಗೆ ಮುಕ್ತಿ ಕೊಡಿಸಿ. ಅದನ್ನು ಬಿಟ್ಟು ಬಸ್ ಮಾಡಿಕೊಂಡು ಜನಗಳನ್ನು ಕರೆಸಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿ ಹಾಗೂ ನಿಖಿಲ್ ಬಗ್ಗೆ ಬಾಯಿಗೆ ಬಂದಂತೆ ಮಾಡನಾಡಲು ನಮಗೆ ಬರುವುದಿಲ್ಲವೇ?. ಇವರ ಹೋರಾಟದಿಂದ ರೈತರಿಗೆ ತೊಂದರೆಯಾಗುತ್ತಿದೆಯೇ ವಿನಃ ಪ್ರಯೋಜನವಾಗುತ್ತಿಲ್ಲ ಎಂದು ತಿಳಿಸಿದರು.
ನಮ್ಮ ಉದ್ದೇಶ ಜಗಳ ಮಾಡುವುದಲ್ಲ. ಇಲ್ಲಿ ತಪ್ಪು ಯಾರಿಂದ ಆಗಿದೆ? ಏನಾಗಿದೆ? ಎಂದು ಜನರಿಗೆ ತಿಳಿಸುವುದು. ಹೀಗಾಗಿ ಸಿಎಂ ಶಿವಕುಮಾರ್ ಅವರು ನೀವು ನಾಲ್ಕೈದು ಜನ ಬನ್ನಿ ಚರ್ಚೆ ಮಾಡೋಣ ಎಂದು ಕರೆದರೆ, ಬೈರಮಂಗಲಕ್ಕೆ ಬನ್ನಿ ಎಂದು ಕರೆಯುತ್ತಿದ್ದಾರೆ ಎಂದರು.
ಬೈರಮಂಗಲದ ಜನ ಒಪ್ಪುತ್ತಿಲ್ಲ ಎಂದು ಕೇಳಿದಾಗ, ಯಾವ ರೈತರು ಒಪ್ಪಿದ್ದಾರೆ, ಯಾರು ಒಪ್ಪಿಲ್ಲ ಎಂದು ಸಧ್ಯದಲ್ಲೇ ಮಾಹಿತಿ ಪ್ರಕಟಿಸುತ್ತೇವೆ. ಕಂಪಯ್ಯನಪಾಳ್ಯದಲ್ಲಿ 570 ರೈತರ ಪೈಕಿ ಸುಮಾರು 500 ರೈತರು ಒಪ್ಪಿಗೆ ಪತ್ರ ನೀಡಿದ್ದಾರೆ. ಈ ಒಪ್ಪಿಗೆ ಪತ್ರ ನೀಡಿರುವವರು ರೈತರಲ್ಲವೇ? ಕೌಟುಂಬಿಕ ಸಮಸ್ಯೆಗಳಿಂದಾಗಿ ಹಾಗೂ ಹೈನುಗಾರಿಕೆ ಆಧಾರಿಸಿ ಜೀವನ ಮಾಡುತ್ತಿರುವವರು ವಿರೋಧ ಮಾಡುತ್ತಿದ್ದಾರೆ. ಅವರಿಗೆ ಬೇರೆ ರೀತಿ ಪರಿಹಾರ ನೀಡಲು ತೀರ್ಮಾನ ಮಾಡಿದ್ದೇವೆ. ಅಲ್ಲಿರುವ ನಿಜವಾದ ರೈತರನ್ನು ಕರೆಸಿ ಮಾತನಾಡಲು ನಾವು ಸಿದ್ಧರಿದ್ದರೂ ಇವರು ಅದಕ್ಕೆ ಅವಕಾಶ ನೀಡುತ್ತಿಲ್ಲ. ಅವರು ಬಂದರೆ, ಇವರು ಗುಂಪುಕಟ್ಟಿಕೊಂಡು ಬರುತ್ತಾರೆ. ರೈತ ಮಹಿಳೆಯೊಬ್ಬರು ನಮ್ಮನ್ನು ಕರೆದಿಲ್ಲ ಎಂದಿದ್ದರು. ಹೀಗಾಗಿ ನಾನು ರೈತಸಂಘದಿಂದ 40 ಜನರನ್ನು ಸಭೆಗೆ ಕರೆದರೆ, ಎಲ್ಲಾ ಊರಿನ ದಳದ ಕಾರ್ಯಕರ್ತರನ್ನು ಶಾಸಕರು ಕರೆಯುತ್ತಿದ್ದಾರೆ, ಗಾಡಿ ಮಾಡಿಕೊಂಡು ಹೋಗಿ ಎಂದು ಎತ್ತಿಕಟ್ಟುತ್ತಿದ್ದಾರೆ. ಇವರ ಉದ್ದೇಶ ಸಮಸ್ಯೆ ಬಗೆಹರಿಸುವುದೇ ಅಥವಾ ಗಲಾಟೆ ಮಾಡುವುದೇ? ನಾಲ್ಕೈದು ಸಾವಿರ ಜನ ಬಂದಾಗ, ಚರ್ಚೆ ಮಾಡಲು ಸಾಧ್ಯವೇ? ಹೋರಾಟದ ಪರವಾಗಿರುವ 25-30 ಜನ ಬಂದರೆ ಸಾಧಕ ಬಾಧಕ ಚರ್ಚೆ ಮಾಡಬಹುದು. ರಾಜಕೀಯ ಲೇಪ ಹಚ್ಚಿದ ಪರಿಣಾಮ ಈ ವಿಚಾರ ಇಂದು ರಾಜಕೀಯವಾಗಿದೆ. ದಳದವರನ್ನು ದೂರವಿಟ್ಟು ರೈತರು ಇವತ್ತಿಗೂ ಚರ್ಚೆಗೆ ಬಂದರೆ ಅವರ ಜೊತೆ ಮಾತನಾಡಲು ನಾವು ಸಿದ್ಧವಿದ್ದೇವೆ. ಅವರಿಗೆ ಅಗತ್ಯವಿರುವ ಎಲ್ಲಾ ಸವಲತ್ತು ನೀಡಿದ್ದೇವೆ. ಅಲ್ಲಿನವರ ವಿರೋಧವಿಲ್ಲ ಎಂದು ನಾನು ಹೇಳುತ್ತಿಲ್ಲ. ವಿರೋಧವಿರುವವರ ಮನವೊಲಿಸುವ ಕೆಲಸ ಮಾಡುತ್ತೇವೆ ಎಂದರು.
ಎಲ್ಲಾ ಕಡೆ ಭೂಸ್ವಾಧೀನ ಪ್ರಕ್ರಿಯೆಗೆ ಈ ರೀತಿ ವಿರೋಧವಾದರೆ ಹೇಗೆ ಎಂದು ಕೇಳಿದಾಗ “ಬೆಂಗಳೂರು ಬೆಳೆಯಬೇಕು ಎಂದಾಗ ರೈತರ ಮನವೊಲಿಸಿ ಯೋಜನೆ ಮಾಡಬೇಕು. ಕುಮಾರಸ್ವಾಮಿ ಅವರು ರೈತರಿಗೆ ಅಭಿವೃದ್ಧಿಪಡಿಸಿದ 40% ಭೂಮಿ ಪರಿಹಾರ ನೀಡುತ್ತೇವೆ ಎಂದು ಹೇಳಿದರು. ಆದರೆ ನಾವು 50% ನೀಡುತ್ತಿದ್ದೇವೆ. ಅವರು ಹೇಳಿದರೆ, ರೈತರ ಪರ, ನಾವು ಹೇಳಿದರೆ ದಲ್ಲಾಳಿಗಳೇ? ಕುಮಾರಸ್ವಾಮಿ ಅವರು ಈ ಯೋಜನೆ ಕೈಬಿಟ್ಟಿದ್ದರೆ 40% ಭೂಮಿ ನೀಡುವ ಬಗ್ಗೆ ಯಾಕೆ ಮಾತನಾಡಿದರು? 2018ರಲ್ಲಿ ಕುಮಾರಸ್ವಾಮಿ ಅವರು ಈ ಯೋಜನೆ ನನ್ನ ಕನಸಿನ ಕೂಸು ಇದನ್ನು ಮಾಡೇ ಮಾಡುತ್ತೇನೆ ಎಂದು ಹೇಳಿದ್ದರಾ ಇಲ್ಲವೇ? ಇದನ್ನು ಅವರ ಆತ್ಮಸಾಕ್ಷಿಗೆ ಬಿಡುತ್ತೇವೆ. ಆಗ ಯೋಜನೆ ಕೈಬಿಟ್ಟಿರುವ ಆದೇಶ ಮಾಡಬೇಕಿತ್ತು. ಇಂತಹ ಯಾವುದೇ ಆದೇಶ ಮಾಡಲಿಲ್ಲ. ನಾವು ರೈತರ ಮೇಲೆ ಏಕಾಏಕಿ ಗದಾಪ್ರಹಾರ ಮಾಡಿಲ್ಲ. 2023ರಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ನಾವು ಇದಕ್ಕೆ ಕೈ ಹಾಕಿಲ್ಲ. ನಮ್ಮ ರೈತರು ಬಂದು ಇದಕ್ಕೆ ಮುಕ್ತಿ ನೀಡಿ ಎಂದು ಮನವಿ ಮಾಡಿದ ಕಾರಣಕ್ಕೆ ನಾವು ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಈ ತೀರ್ಮಾನ ಮಾಡಿದೆವು. ರೈತರಿಗೆ ಅಗತ್ಯ ನೆರವು ನೀಡಲು ಸಿದ್ಧರಿದ್ದೇವೆ. ಈಗಾಗಲೇ ಬೇರೆ ಪಂಚಾಯಿತಿಗಳಲ್ಲಿ ಅಭಿವೃದ್ಧಿಯಾಗಿರುವ ಉದಾಹರಣೆ ನೀಡಿದ್ದೇನೆ. ಅಲ್ಲಿರುವವರು ರೈತರಲ್ಲವೇ? ನಾವು ಹಣವನ್ನೇ ತೆಗೆದುಕೊಳ್ಳಿ ಎಂದು ರೈತರಿಗೆ ಒತ್ತಾಯ ಮಾಡುತ್ತಿಲ್ಲ. ರೈತರು 50% ಅಭಿವೃದ್ಧಿಪಡಿಸಿದ ಭೂಮಿಯನ್ನೇ ತೆಗೆದುಕೊಳ್ಳಲಿ. ಈ ಭಾಗ ಅಭಿವೃದ್ಧಿಯಾಗುತ್ತಿದ್ದಂತೆ ರೈತರ ಭೂಮಿಗೆ ಹೆಚ್ಚಿನ ಮೌಲ್ಯ ಬರುತ್ತದೆ. ಇದನ್ನು ಕುಮಾರಸ್ವಾಮಿ ಇದನ್ನು ಅರ್ಥಮಾಡಿಕೊಳ್ಳಬೇಕು. ಮಾಧ್ಯಮಗಳ ಮುಂದೆ ಚರ್ಚೆಗೆ ಬಂದರೆ ನಾವು ಸಿದ್ಧ, ಬಿದಿಗೆ ಬನ್ನಿ ಹೊಡೆದಾಡೋಣ ಎಂದರೆ ನಾವು ಅದಕ್ಕೆ ಸಿದ್ಧರಿಲ್ಲ ಎಂದು ತಿಳಿಸಿದರು.
ವಿಧಾನಸಭೆಯಲ್ಲಿ ನೀವು ಈ ಯೋಜನೆ ವಿರೋಧಿಸಿದ್ದ ದಾಖಲೆಗಳನ್ನು ಕುಮಾರಸ್ವಾಮಿ ದಾಖಲೆ ಬಿಡುಗಡೆ ಮಾಡಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಬಾಲಕೃಷ್ಣ, ನಾವು ಬಹುತೇಕ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿದ್ದಿದ್ದೇವೆ. ರೈತರ ಒತ್ತಾಯದ ಮೇರೆಗೆ ನಾವು 50% ಭೂಮಿ ಪರಿಹಾರವಾಗಿ ನೀಡಲು ಸಿದ್ಧ ಎಂದು ತಿಳಿಸಿದ್ದಾರೆ. ಅಲ್ಲಿ ಗಲೀಜು ನೀರಿನಲ್ಲಿ ವ್ಯವಸಾಯ ಮಾಡಲಾಗುತ್ತಿದೆ. ಅಲ್ಲಿನ ಕೆರೆ ಶುದ್ಧೀಕರಣಕ್ಕೆ 2 ಸಾವಿರ ಕೋಟಿ ಹಣ ಮೀಸಲಿಡಲಾಗಿದೆ. ಹೋರಾಟ ಮಾಡುತ್ತಿರುವ ನಾಯಕರು ಒಂದು ಬಾರಿ ಆ ಕೆರೆಯಲ್ಲಿ ಇಳಿಯಲಿ ಕೈಕಾಲುಗಳಲ್ಲಿ ಕಜ್ಜಿ ಬರುತ್ತವೆ. ಕಾಲಿಗೆ ಬೂಟ್, ಕೈಗೆ ಗ್ಲೌಸ್ ಹಾಕದೇ ಅಲ್ಲಿ ವ್ಯವಸಾಯ ಮಾಡಲು ಸಾಧ್ಯವಿಲ್ಲ. ಅಲ್ಲಿ ನೀರಾವರಿ ವ್ಯವಸ್ಥೆ ಅತ್ಯುತ್ತಮವಾಗಿದ್ದರೆ ನಾವು ಒಪ್ಪಿಕೊಳ್ಳುತ್ತಿದ್ದೆವು. ಗಲೀಜು ನೀರು ಅಲ್ಲಿದೆ ಎಂದರು.
ಇವರು ಸರ್ಕಾರದ ಬಳಿ ದುಡ್ಡಿಲ್ಲ, ಪರಿಹಾರ ನೀಡುವುದಿಲ್ಲ ಎಂದು ಅಪಪ್ರಚಾರ ಮಾಡಿದರು. ನಾವು ಕಾನೂನು ಪ್ರಕಾರ ಚೆಕ್ ನೀಡುವಂತಿಲ್ಲ. ಆರ್ ಟಿಜಿಎಸ್ ಮಾಡಬೇಕು. ಭೂಮಿ ನೀಡಲು ಒಪ್ಪಿಗೆ ಕೊಡುವ ರೈತರಿಗೆ ಆರ್ ಟಿಜಿಎಸ್ ಮಾಡುವ ಪ್ರಕ್ರಿಯೆಯಲ್ಲಿದೆ. ನಿನ್ನೆಯೂ 30-40 ಜನರಿಗೆ ಹಣ ರವಾನೆ ಮಾಡಲಾಗಿದೆ. ಈ ಭೂಮಿ ಮೇಲೆ 1 ಲಕ್ಷ ಪಡೆದಿರುವ ಸಾಲ 10 ಲಕ್ಷದವರೆಗೂ ಏರಿಕೆಯಾಗಿದ್ದವು. ನಾವು ಬ್ಯಾಂಕಿನವರನ್ನು ಕರೆಸಿ ಒಟಿಎಸ್ ಮಾಡುತ್ತಿದ್ದೇವೆ. ರೈತರಿಂದ ಅಸಲು ಕಟ್ಟಿಸಿ, ಉಳಿದ ಬಡ್ಡಿ ಮನ್ನಾ ಮಾಡಲು ಬ್ಯಾಂಕಿನವರೊಂದಿಗೆ ಚರ್ಚೆ ಮಾಡಲಾಗಿದೆ. ಇದಕ್ಕೆ ಬ್ಯಾಂಕಿನವರು ಮುಂದಾಗಿದ್ದಾರೆ. ಕುಮಾರಸ್ವಾಮಿ ಹಾಗೂ ನಿಖಿಲ್ ಅವರಿಗೆ ಶಿವಕುಮಾರ್ ಜನಪ್ರಿಯತೆ ಸಹಿಸಲಾಗುತ್ತಿಲ್ಲ ಎಂದು ತಿಳಿಸಿದರು.
ಈ ಯೋಜನೆ ಮಾಡಿದಾಗ ಇದನ್ನು ಸಂಪೂರ್ಣ ನಿರ್ವಹಣೆಯಲ್ಲು ಜಿಬಿಐಟಿ ನಿರ್ವಹಣೆ ಮಾಡಬೇಕು. ಕೆರೆ ಅಭಿವೃದ್ಧಿ ಮಾಡಿ ಇವರಿಗೆ ನಿರ್ವಹಣೆಗೆ ನೀಡಲು ಮುಂದಾಗಿದ್ದೇವೆ. ಈ ಕೆರೆ ನೀರು ಶಾಶ್ವತವಾಗಿ ಉತ್ತಮವಾಗಿರಬೇಕು ಎಂದು ಯೋಜನೆ ರೂಪಿಸುತ್ತಿದ್ದೇವೆ. ಕೇವಲ ಒಂದು ಭಾಗದ ಹಸಿರು ಮಾತ್ರ ಯಾಕೆ ತೋರಿಸುತ್ತೀರಿ? ಪಕ್ಕದ ಬನ್ನಿಕುಪ್ಪೆ ಪಂಚಾಯಿತಿ, ಇತರ ಪಂಚಾಯಿತಿ ತೋರಿಸಿ. ಅಲ್ಲಿ ಹಸಿರು ಇಲ್ಲ ಎಲ್ಲಾ ಬಡಾವಣೆಗಳಾಗಿವೆ. ಕುಮಾರಸ್ವಾಮಿ ರೆಡ್ ಜೋನ್ ಮಾಡಿರುವುದರಿಂದ ಇಲ್ಲಿ ಹಸಿರು ಹಾಗೇ ಉಳಿದಿದೆ. ಇಲ್ಲದಿದ್ದರೆ ಇಲ್ಲೂ ರಿಯಲ್ ಎಸ್ಟೇಟ್ ಆಗುತ್ತಿತ್ತು. 33 ಸಾವಿರ ಕೋಟಿ ಎಂದು ಹೇಳುತ್ತಾರೆ. ಅದರಲ್ಲಿ 20 ಸಾವಿರ ಕೋಟಿ ಪರಿಹಾರಕ್ಕೆ ನೀಡಬೇಕು. ಉಳಿದ ಹಣ ರಸ್ತೆ ಹಾಗೂ ಇತರೆ ಮೂಲಸೌಕರ್ಯಕ್ಕೆ ನೀಡಬೇಕು. ಹೆಚ್ಚಿನ ರೈತರು ನಮಗೆ ಪರಿಹಾರ ಬೇಕು ಎಂದು ಕೇಳಿದ ಕಾರಣಕ್ಕೆ ನಾವು ಈ ಯೋಜನೆ ಕೈಗೆತ್ತಿಕೊಂಡೆವು. ಸಿದ್ದರಾಮಯ್ಯ ಅವರು ಇದ್ದಾಗ ನಿಖಿಲ್ ಹಾಗೂ ಕುಮಾರಸ್ವಾಮಿ ಅವರು ಒಂದು ದಿನವೂ ಹೋರಾಟ ಮಾಡಲಿಲ್ಲ. ಈಗ ಡಿ.ಕೆ. ಶಿವಕುಮಾರ್ ಸಿಎಂ ಆದ ಬಳಿಕ ಯಾಕೆ ಹೋರಾಟ ಯಾಕೆ? ಎಂದರು.
ರೈತರಿಗೆ ಏನು ಬೇಕೋ ಅದನ್ನು ಮಾಡುತ್ತೇವೆ. ರೈತರಿಗೆ ಗರಿಷ್ಠ ಸಹಕಾರ ನೀಡುತ್ತೇವೆ. ರೆಡ್ ಜೋನ್ ವಲಯವಾಗಿರುವುದರಿಂದ ಅಲ್ಲಿ 1 ಕೋಟಿಗೂ ಅಧಿಕ ಪರಿಹಾರ ನೀಡಲು ಅವಕಾಶವಿಲ್ಲ. 500 ಎಕರೆ ವರ್ಗಾವಣೆಯಾಗಿದ್ದು, ಎಲ್ಲವೂ 50-80 ಲಕ್ಷಕ್ಕೆ ವರ್ಗಾವಣೆಯಾಗಿದೆ. ಆದರೆ ನಾವು 2.50 ಕೋಟಿ ನೀಡುತ್ತಿದ್ದೇವೆ. ಹಣ ಬೇಡವಾದರೆ ಭೂಮಿಯನ್ನೇ ಪರಿಹಾರವಾಗಿ ಪಡೆಯಿರಿ. ನಮ್ಮ ಅಭ್ಯಂತರವಿಲ್ಲ. ಸಣ್ಣ ರೈತರ ರಕ್ಷಣೆಗಾಗಿ ನಾವು ದುಬಾರಿ ಪರಿಹಾರ ನೀಡುತ್ತಿದ್ದೇವೆ. ಬಡವರಿಗೆ ಅನುಕೂಲವಾಗಲಿ ಎಂದು ಇಡಗಂಟು ನೀಡುತ್ತಿದ್ದೇವೆ ಎಂದು ತಿಳಿಸಿದರು.
ನಾವು ಈಗ ಬಿಡದಿ ಟೌನ್ ಶಿಪ್ ನನ್ನ ಕನಸಿನ ಕೂಸು ಎಂದು ಕುಮಾರಸ್ವಾಮಿ ಹೇಳಿದ್ದಾರೋ ಇಲ್ಲವೋ ಎಂದು ಕುಮಾರಸ್ವಾಮಿ ಅವರಿಂದ ಧರ್ಮಸ್ಥಳದಲ್ಲಿ ಆಣೆ ಮಾಡಿಸಬೇಕಿದೆ. ಅಡ್ಡಮತದಾನಕ್ಕೆ ಬಿಜೆಪಿಯವರು ಆಣೆ-ಪ್ರಮಾಣ ಮಾಡಿರುವಾಗ, ಈ ವಿಚಾರದಲ್ಲೂ ನಾವು ಕರೆಯಬೇಕಿದೆ ಎಂದರು.
ಕುಮಾರಸ್ವಾಮಿ ಜೊತೆಗೆ ನಾನು ಬೆಳೆದವನು. ಅವರು ಬೇರೆ ಯಾರು ಸಿಎಂ ಆಗುವುದನ್ನು ಸಹಿಸುವುದಿಲ್ಲ. ಈ ರಾಜ್ಯಕ್ಕೆ ಈ ಮುಖ್ಯಮಂತ್ರಿಯಾಗಿ ಒಳ್ಳೆಯದಾಗುವುದಾದರೆ ನನ್ನಿಂದ ಮಾತ್ರ ಎಂಬ ಮನೋಭಾವವಿದೆ. ಅವರ ಭಾವನೆ, ರೀತಿ ನೀತಿ ಸರಿಯಾಗಿದ್ದರೆ ಇಷ್ಟು ಹೊತ್ತಿಗೆ 124 ಶಾಸಕರನ್ನು ಗೆಲ್ಲಿಸುತ್ತಿದ್ದರು. ಶಿವಕುಮಾರಸ್ವಾಮಿಜಿ ಮೇಲೆ ಆಣೆ ಮಾಡಿ ಯಡಿಯೂರಪ್ಪಗೆ ಅಧಿಕಾರ ನೀಡುತ್ತೇನೆ ಎಂದು ಆಣೆ ಮಾಡಿದವರು, ನಂತರ ಅಧಿಕಾರ ಹಸ್ತಾಂತರ ಮಾಡಲಿಲ್ಲ. ನಂತರ ಯಡಿಯೂರಪ್ಪ ಅವರನ್ನು ಕಣ್ಣೀರು ಹಾಕಿಸಿ ಅಧಿಕಾರದಿಂದ ಇಳಿಸಿದರು. ಅವರಿಗೆ ಡಿ.ಕೆ. ಶಿವಕುಮಾರ್ ಸಿಎಂ ಆದ ಬಳಿಕ ನಿದ್ದೆ ಬರುತ್ತಿಲ್ಲ. ರಾತ್ರಿ ಡಿ.ಕೆ.ಶಿವಕುಮಾರ್ ಅವರೇ ಯೋಚನೆಯಲ್ಲಿ ಇರುತ್ತಾರೆ. ಹೀಗಾಗಿ ದೆಹಲಿ ಬಿಟ್ಟು ಇಲ್ಲಿಗೆ ಬಂದಿದ್ದಾರೆ ಎಂದು ತಿರುಗೇಟು ನೀಡಿದರು.
ಬಿಡದಿ ಯೋಜನೆ ಕೈಬಿಟ್ಟರೆ ಅವರ 5 ಎಕರೆಯನ್ನು ಜನರಿಗೆ ನೀಡುವುದಾಗಿ ನಿಖಿಲ್ ಹೇಳಿರುವ ವಿಚಾರವಾಗಿ, ಅವರ ತಂದೆಯೇ ಯೋಜನೆ ಕೈಬಿಡಲಿಲ್ಲ, ನಾವು ಬಿಡಲು ಹೇಗೆ ಸಾಧ್ಯ? ಅವರು ತಮ್ಮ ಜಮೀನು ಕೊಟ್ಟರೆ ಹೋರಾಟ ಮಾಡುತ್ತಿರುವ ರೈತರಿಗೆ ಒಂದೊಂದು ನಿವೇಶನ ನೀಡುತ್ತೇವೆ. ಬೇಕಾದರೆ ಅವರ ಹೆಸರನ್ನೇ ಆ ಬಡಾವಣೆಗೆ ಇಡುತ್ತೇವೆ. ಅವರು ಬೇನಾಮಿಯಲ್ಲಿ ಜಮೀನು ಮಾಡಿ, ಬೇನಾಮಿಗೆ ಹಣ ಹೋಗುತ್ತದೆ ಎಂದು ಜಿಬಿಐಟಿಗೆ ಪತ್ರ ಬರೆದರು. ಜನರಿಗೆ ಕೊಡುವವರು, ಜಿಬಿಐಟಿಗೆ ಪತ್ರ ಯಾಕೆ ಬರೆದರು?. 10 ಲಕ್ಷಕ್ಕೆ ಖರೀದಿ ಮಾಡಿದ ಜಮೀನು 2 ಕೋಟಿಗೆ ಹೋಗುತ್ತಿದೆ ಎಂದು ಪ್ರಶ್ನಿಸಿದರು.
HDK ಆರೋಪ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ:
ಬಿಡದಿ ಟೌನ್ ಶಿಪ್ ಯೋಜನೆಗೆ ಬೆಂಬಲ ನೀಡುವ ಶಾಸಕರಿಗೆ ಒಂದು ನಿವೇಶನ ನೀಡಲಾಗುತ್ತಿದೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಬಾಲಕೃಷ್ಣ, ಮಾನ ಮರ್ಯಾದೆ ಇದ್ದರೆ ದಾಖಲೆ ಸಮೇತ ಹೇಳಬೇಕು. ಕೇಂದ್ರದ ಮಂತ್ರಿಯಾಗಿ ಇಂತಹ ಕ್ಷುಲ್ಲಕ ಹೇಲಿಕೆ ನೀಡುವುದನ್ನು ಬಿಡಬೇಕು ಎಂದು ಮನವಿ ಮಾಡುವೆ. ಈ ರೀತಿ ನಿಖಿಲ್ ಅಥವಾ ಬೇರೆ ಬುರುಡೆ ಬಿಡುವ ನಾಯಕರು ಮಾತನಾಡಲಿ. ಕೇಂದ್ರದ ಮಂತ್ರಿಯಾಗಿ ಚಿಲ್ಲರೆ ರಾಜಕಾರಣ ಬಿಡಲಿ. ಅವರು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಪಡೆಯುವೆ, ಇಲ್ಲವಾದರೆ ಅವರು ರಾಜಕೀಯ ನಿವೃತ್ತಿ ಪಡೆಯುತ್ತಾರಾ? ಇಂತಹ ಪ್ರಶ್ನೆ ಕೇಳಬೇಡಿ ಅಸಹ್ಯವಾಗುತ್ತದೆ. ಅವರಂತೆ ಕೀಳು ಮಟ್ಟಕ್ಕೆ ಇಳಿಯಲು ನಾವು ಸಿದ್ಧರಿಲ್ಲ ಎಂದು ಸವಾಲೆಸೆದರು.

