ಮೊಟ್ಟಮೊದಲ ಐಸಿಸಿ ಮಹಿಳಾ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಭಾರತ ಆತಿಥ್ಯ ವಹಿಸಲಿದೆ. ಈ ಕುರಿತು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಮಾಹಿತಿ ನೀಡಿದ್ದು, 2027ರ ಫೆಬ್ರವರಿ 14ರಿಂದ 28ರವರೆಗೆ ಟೂರ್ನಿ ನಡೆಯಲಿದೆ.
ಈ ಟೂರ್ನಿಯಲ್ಲಿ ಒಟ್ಟು 6 ತಂಡಗಳು ಭಾಗವಹಿಸಲಿವೆ. ಮೊದಲ ಆವೃತ್ತಿಯ ಎಲ್ಲಾ ಪಂದ್ಯಗಳು ಮುಂಬೈನ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ (CCI) ಮತ್ತು ವಡೋದರದ ವಡೋದರ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿವೆ.
ವಾಸ್ತವವಾಗಿ ಈ ಟೂರ್ನಿ ಶ್ರೀಲಂಕಾದಲ್ಲಿ ನಡೆಯಬೇಕಿತ್ತು. ಆದರೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಆಡಳಿತ ವ್ಯವಹಾರಗಳಲ್ಲಿ ಅಲ್ಲಿನ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ ಎಂಬ ಕಾರಣಕ್ಕೆ ಐಸಿಸಿ, ಶ್ರೀಲಂಕಾದಿಂದ ಆತಿಥ್ಯ ಹಕ್ಕುಗಳನ್ನು ಹಿಂಪಡೆದಿದೆ.
ಈ ಟೂರ್ನಿಗೆ ಆತಿಥ್ಯ ವಹಿಸಲು ಬಾಂಗ್ಲಾದೇಶ, ಭಾರತ ಮತ್ತು ದಕ್ಷಿಣ ಆಫ್ರಿಕಾ ದೇಶಗಳನ್ನು ಐಸಿಸಿ ತನ್ನ ನಿಗದಿತ ಆತಿಥ್ಯ ಮೌಲ್ಯಮಾಪನ ಮಾನದಂಡಗಳ ಆಧಾರದ ಮೇಲೆ ಪರಿಶೀಲಿಸಿತು. ಬಳಿಕ ಪರ್ಯಾಯ ಆತಿಥೇಯ ರಾಷ್ಟ್ರವಾಗಿ ಭಾರತವನ್ನು ಶಿಫಾರಸು ಮಾಡಲಾಗಿತ್ತು. ಈ ನಿರ್ಧಾರಕ್ಕೆ ಸೆಪ್ಟೆಂಬರ್ 1ರಂದು ಐಸಿಸಿ ಮಂಡಳಿ ಅನುಮೋದನೆ ನೀಡಿದೆ.
ಮಹಿಳಾ ಚಾಂಪಿಯನ್ಸ್ ಟ್ರೋಫಿ 2027 ಮಹಿಳಾ ಕ್ರಿಕೆಟ್‌ನಲ್ಲಿ ಹೊಸ ಹಾಗೂ ರೋಚಕ ಅಧ್ಯಾಯಕ್ಕೆ ನಾಂದಿ ಹಾಡಲಿದೆ ಎಂದು ಐಸಿಸಿ ಅಧ್ಯಕ್ಷ ಜೈ ಶಾ ಹೇಳಿದ್ದಾರೆ.ಟೂರ್ನಿಯಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ತಂಡಗಳು ಭಾಗವಹಿಸಲಿವೆ. ಈ ಮೆಗಾ ಟೂರ್ನಿಯನ್ನು ಟಿ20 ಮಾದರಿಯಲ್ಲಿ ಆಯೋಜಿಸಲಾಗುತ್ತದೆ.
ಆರು ತಂಡಗಳು ರೌಂಡ್-ರಾಬಿನ್ ಲೀಗ್ ಮಾದರಿಯಲ್ಲಿ ಪರಸ್ಪರ ಸೆಣಸಲಿವೆ. ಲೀಗ್ ಹಂತದಲ್ಲಿ ಅಗ್ರಸ್ಥಾನ ಪಡೆಯುವ ಎರಡು ತಂಡಗಳು ಫೆಬ್ರವರಿ 28ರಂದು ನಡೆಯಲಿರುವ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಮುಖಾಮುಖಿಯಾಗಲಿವೆ.

