HomeInternationalಕಾಲ್ನಡಿಗೆಯಲ್ಲಿದ್ದ ಭಾರತೀಯ ಯುವತಿಯನ್ನು ತಡೆದ ತಾಲಿಬಾನ್ ಬೆಂಬಲಿಗ : ‘ಭಾರತ’ ದ ಹೆಸರು ಕೇಳುತ್ತಿದ್ದಂತೆ ಬದಲಾಯ್ತು...

ಕಾಲ್ನಡಿಗೆಯಲ್ಲಿದ್ದ ಭಾರತೀಯ ಯುವತಿಯನ್ನು ತಡೆದ ತಾಲಿಬಾನ್ ಬೆಂಬಲಿಗ : ‘ಭಾರತ’ ದ ಹೆಸರು ಕೇಳುತ್ತಿದ್ದಂತೆ ಬದಲಾಯ್ತು ವಾತಾವರಣ | Watch

ಅಫ್ಘಾನಿಸ್ತಾನದಲ್ಲಿ ಕಾಲ್ನಡಿಗೆಯಲ್ಲೇ ಪ್ರವಾಸ ಕೈಗೊಂಡಿದ್ದ ಭಾರತೀಯ ಯುವತಿಯೊಬ್ಬರನ್ನು ಸ್ಥಳೀಯರು ಹಾಗೂ ತಾಲಿಬಾನ್ ಬೆಂಬಲಿಗನೆನ್ನಲಾದ ವ್ಯಕ್ತಿಯೊಬ್ಬ ತಡೆದು ವಿಚಾರಣೆ ನಡೆಸಿದ ಅಪರೂಪದ ಹಾಗೂ ರೋಚಕ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ತಾನು ಭಾರತದವಳು ಎಂದು ಆಕೆ ಹೇಳುತ್ತಿದ್ದಂತೆ ಸ್ಥಳೀಯರ ವರ್ತನೆ ಕ್ಷಣಾರ್ಧದಲ್ಲಿ ಬದಲಾಗಿದ್ದು, ಎಲ್ಲರೂ ಆಕೆಯನ್ನು ಪ್ರೀತಿಯಿಂದ ಸ್ವಾಗತಿಸಿದ್ದಾರೆ.

ಅರುಣಿಮಾ ಎಂಬ ಭಾರತೀಯ ಪ್ರವಾಸಿ ಯುವತಿಗೆ ಈ ವಿಶಿಷ್ಟ ಅನುಭವ ಎದುರಾಗಿದೆ. ಆಕೆ ಕಾಬೂಲ್ ನಗರದತ್ತ ಒಬ್ಬಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.

ಅರುಣಿಮಾ ಅವರ ಪ್ರಕಾರ, ದಾರಿಯಲ್ಲಿ ಹೋಗುತ್ತಿದ್ದಾಗ ವ್ಯಕ್ತಿಯೊಬ್ಬ ಆಕೆಯನ್ನು ತಡೆದು ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾನೆ. ಅದಕ್ಕೆ ಆಕೆ “ಕಾಬೂಲ್ ಕಡೆಗೆ” ಎಂದು ಉತ್ತರಿಸಿದ್ದಾರೆ. ಹೇಗೆ ಹೋಗುತ್ತಿದ್ದೀರಿ ಎಂದು ಆತ ಮತ್ತೆ ಕೇಳಿದಾಗ, “ಕಾಲ್ನಡಿಗೆಯಲ್ಲೇ ಹೋಗುತ್ತಿದ್ದೇನೆ” ಎಂದು ಅರುಣಿಮಾ ತಿಳಿಸಿದ್ದಾರೆ. ವಾಹನಗಳಿಲ್ಲದೆ ಒಬ್ಬಂಟಿ ಮಹಿಳೆ ನಡೆದುಕೊಂಡು ಹೋಗುತ್ತಿರುವುದನ್ನು ಕಂಡು ಅನುಮಾನಗೊಂಡ ಆತ, ತಕ್ಷಣವೇ ಪಾಸ್‌ಪೋರ್ಟ್ ತೋರಿಸುವಂತೆ ತಾಕೀತು ಮಾಡಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅರುಣಿಮಾ ತಮ್ಮ ಪಾಸ್‌ಪೋರ್ಟ್ ನೀಡಿದಾಗ, ಆತ ಅದನ್ನು ಪದೇಪದೇ ಪರಿಶೀಲಿಸಿದ್ದಾನೆ. ಅಷ್ಟರಲ್ಲೇ ಅಲ್ಲಿ ಸ್ಥಳೀಯರ ಗುಂಪು ಜಮಾಯಿಸಿದ್ದು, ಆಕೆಗೆ ಯಾವ ಭಾಷೆ ಗೊತ್ತು ಎಂದು ವಿಚಾರಿಸಲಾರಂಭಿಸಿದೆ. ಈ ನಡುವೆ ಸೈಕಲ್‌ನಲ್ಲಿ ಬಂದ ಬಾಲಕನೊಬ್ಬ, ನೀವು ಉಳಿದುಕೊಂಡಿರುವ ಹೊಟೇಲ್ ಯಾವುದು ಎಂದು ಕೇಳಿದ್ದಾನೆ. ಅದಕ್ಕೆ ಆಕೆ, ತಾನು ಯಾವುದೇ ಹೊಟೇಲ್‌ನಲ್ಲಿ ಉಳಿದಿಲ್ಲ, ನಡೆದುಕೊಂಡೇ ಕಾಬೂಲ್‌ಗೆ ತೆರಳುತ್ತಿರುವುದಾಗಿ ಹೇಳಿದ್ದಾರೆ. ಆಗ ಆ ಬಾಲಕ ನಿಮ್ಮದು ಯಾವ ದೇಶ ಎಂದು ಪ್ರಶ್ನಿಸಿದ್ದಾನೆ.

ಆರಂಭದಲ್ಲಿ ಅರುಣಿಮಾ ತಜಕಿಸ್ತಾನ ಎಂದು ಹೇಳಿದರೂ, ಬಳಿಕ ತಾನು ಭಾರತದವಳು ಎಂದು ಸ್ಪಷ್ಟಪಡಿಸಿದ್ದಾರೆ. ಆಕೆಯ ಬಾಯಿಂದ “ಭಾರತ” ಎಂಬ ಹೆಸರು ಕೇಳುತ್ತಿದ್ದಂತೆ ಅಲ್ಲಿ ನೆರೆದಿದ್ದವರ ಮುಖದಲ್ಲಿ ಆಶ್ಚರ್ಯ ಹಾಗೂ ನಗು ಮೂಡಿದ್ದು, ಒಬ್ಬ ವ್ಯಕ್ತಿ ತಕ್ಷಣವೇ “ಅಫ್ಘಾನಿಸ್ತಾನಕ್ಕೆ ನಿಮಗೆ ಸುಸ್ವಾಗತ” ಎಂದು ಪ್ರೀತಿಯಿಂದ ಬರಮಾಡಿಕೊಂಡಿದ್ದಾನೆ.

ಸ್ಥಳೀಯರು ಆಕೆಗೆ ವಾಹನಗಳನ್ನು ಬಳಸದೆ ಕಾಲ್ನಡಿಗೆಯಲ್ಲೇ ಏಕೆ ಪ್ರಯಾಣಿಸುತ್ತಿದ್ದೀರಿ ಎಂದು ಆಶ್ಚರ್ಯದಿಂದ ಕೇಳಿದ್ದಾರೆ. ಅದಕ್ಕೆ ಅರುಣಿಮಾ, ತಾವು ಕಳೆದ ಹಲವು ವರ್ಷಗಳಿಂದ ಸಾಂಪ್ರದಾಯಿಕ ವಾಹನಗಳನ್ನು ಬಳಸದೆ, ಕಾಲ್ನಡಿಗೆ ಹಾಗೂ ಸಿಕ್ಕ ವಾಹನಗಳಲ್ಲಿ ಉಚಿತವಾಗಿ ಪಯಣಿಸುತ್ತಾ ವಿಶ್ವ ಪರ್ಯಟನೆ ಮಾಡುತ್ತಿರುವುದಾಗಿ ವಿವರಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ಪ್ರಯಾಣಿಸುವಾಗ ತನ್ನನ್ನು ಹಲವೆಡೆ ತಡೆದು ಪ್ರಶ್ನಿಸಲಾಗುತ್ತಿದೆ ಎಂದು ಆಕೆ ಬರೆದುಕೊಂಡಿದ್ದಾರೆ.

ಅರುಣಿಮಾ ಕಳೆದ ಆರು ವರ್ಷಗಳಿಂದ ನಿರಂತರ ಪ್ರವಾಸದಲ್ಲಿದ್ದು, ಭಾರತದ ಬಹುತೇಕ ಎಲ್ಲಾ ರಾಜ್ಯಗಳು ಸೇರಿದಂತೆ ಶ್ರೀಲಂಕಾ, ಯುಎಇ, ವಿಯೆಟ್ನಾಂ, ಥಾಯ್ಲೆಂಡ್, ಚೀನಾ, ಸಿಂಗಾಪುರ, ಮಲೇಷ್ಯಾ, ಕೀನ್ಯಾ, ಭೂತಾನ್ ಹಾಗೂ ಒಮಾನ್ ಸೇರಿದಂತೆ ಹತ್ತಾರು ದೇಶಗಳನ್ನು ಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹರಿದಾಡುತ್ತಿದ್ದಂತೆ ನೆಟ್ಟಿಗರು ವ್ಯಾಪಕ ಪ್ರತಿಕ್ರಿಯೆ ನೀಡಿದ್ದಾರೆ. ಅರುಣಿಮಾ ತಾವು ಭಾರತೀಯಳು ಎಂದು ಹೇಳಿದ್ದೇ ಆಕೆಯನ್ನು ಸಂಕಷ್ಟದಿಂದ ಪಾರುಮಾಡಿತು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಅಫ್ಘಾನಿಸ್ತಾನದಲ್ಲಿ ಭಾರತೀಯರಿಗೆ ಅಪಾರ ಗೌರವವಿದ್ದು, ಭಾರತದ ಹೆಸರು ಹೇಳಿದರೆ ಜನ ದಾಖಲೆಗಳನ್ನೂ ಕೇಳದೆ ಗೌರವಿಸುತ್ತಾರೆ, ಇದು ಉಭಯ ದೇಶಗಳ ನಡುವಿನ ಸಾಂಸ್ಕೃತಿಕ ಪ್ರೀತಿಗೆ ಸಾಕ್ಷಿ ಎಂದು ನೆಟ್ಟಿಗರು ಕೊಂಡಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular