ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ಯುವತಿಯೊಂದಿಗೆ ಮ್ಯಾನೇಜರ್ ಅಸಭ್ಯವಾಗಿ ವರ್ತಿಸಿ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿರುವ ‘ತಂದೂರ್ ಹೋಟೆಲ್’ನಲ್ಲಿ ಈ ಘಟನೆ ನಡೆದಿದೆ. ಯುವತಿ ಮೇಲೆ ಮ್ಯಾನೇಜರ್ ಅಸಭ್ಯವಾಗಿ ವರ್ತಿಸಿ, ಹಲ್ಲೆ ನಡೆಸಿದ್ದು, ಹೋಟೆಲ್ ಮ್ಯಾನೇಜರ್ ರವಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಕೀರ್ತಿ ಎಂಬ ಯುವತಿ ಏ.27ರಂದು ಮಧ್ಯಾಹ್ನ ಸುಮಾರು 2:30ರ ಸಮಯದಲ್ಲಿ ತಮ್ಮ ಸ್ನೇಹಿತರೊಂದಿಗೆ ಊಟಕ್ಕಾಗಿ ತಂದೂರ್ ಹೋಟೆಲ್‌ಗೆ ತೆರಳಿದ್ದರು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಗ್ರಾಹಕರು ಮತ್ತು ಹೋಟೆಲ್ ಮ್ಯಾನೇಜರ್ ನಡುವೆ ಗಲಾಟೆ ನಡೆದಿದೆ.
ಹೋಟೆಲ್ ಮ್ಯಾನೇಜರ್ ರವಿ ಯುವತಿಯೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಯುವತಿಯ ಮೇಲೆ ಹಲ್ಲೆ ನಡೆಸಿದ್ದು, ಗಲಾಟೆಯ ಸಂದರ್ಭದಲ್ಲಿ ಮ್ಯಾನೇಜರ್ ಯುವತಿಯ ಬಟ್ಟೆ ಹರಿಯಲು ಯತ್ನಿಸಿದ್ದಾಗಿ ಆರೋಪಿಸಲಾಗಿದೆ. ಈ ಬಗ್ಗೆ ಯುವತಿ ಹಲಸೂರು ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಹೊಟೇಲ್ ಮ್ಯಾನೇಜರ್ ರವಿ ಎಂಬಾತನ ವಿರುದ್ಧ ಎಫ್ ಐಆರ್ ದಾಖಲಿಸಿದ್ದು, ಸಿಸಿಟಿವಿ ಕ್ಯಾಮರಾ ಪರಿಶೀಲನೆ ನಡೆಸಿದ್ದಾರೆ.

