HomeKarnatakaಬೆಂಗಳೂರಿನಲ್ಲಿ ಕಸದ ಸಮಸ್ಯೆ ನಿವಾರಣೆಗೆ GBA ಮಾಸ್ಟರ್ ಪ್ಲಾನ್: ಸಮಸ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಸಂಜೆ ವೇಲೆಯೂ...

ಬೆಂಗಳೂರಿನಲ್ಲಿ ಕಸದ ಸಮಸ್ಯೆ ನಿವಾರಣೆಗೆ GBA ಮಾಸ್ಟರ್ ಪ್ಲಾನ್: ಸಮಸ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಸಂಜೆ ವೇಲೆಯೂ ಕಸ ಸಂಗ್ರಹ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಸದ ಸಮಸ್ಯೆಗೆ ಶಾಶ್ವತ ಪರಿಹ್ಗಾರ ಕಂಡುಕೊಳ್ಳಲು ಗ್ರೇಟರ್​​ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮಹತ್ವದ ನಿರ್ಣಯ ಕೈಗೊಂಡಿದೆ. ನಿರಂತರವಾಗಿ ಕಸದ ಸಮಸ್ಯೆ ಎದುರಾಗುತ್ತಿರುವ ಪ್ರದೇಶಗಳನ್ನು ಗುರುತಿಸಿ ಸಂಜೆ ವೇಳೆಯೂ ಕಸ ಸಂಗ್ರಹಕ್ಕೆ ಸೂಚಿಸಲಾಗಿದೆ.

ಅಗತ್ಯವಿರುವೆಡೆ ಸಂಜೆ ವೇಳೆಯಲ್ಲೂ ಆಟೋ ಟಿಪ್ಪರ್‌ಗಳನ್ನು ನಿಯೋಜಿಸಿ ಕಸವನ್ನು ಸಕಾಲದಲ್ಲಿ ಸಂಗ್ರಹಿಸುವಂತೆ ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಹಾಗೂ ರಸ್ತೆ ಬದಿಯಲ್ಲಿ ಕಸ ಹಾಕುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮುಖ್ಯ ಆಯುಕ್ತರು ನಿರ್ದೇಶನ ನೀಡಿದ್ದು, ಕಸದ ನಿರ್ವಹಣೆಯಲ್ಲಿ ಸಹಕರಿಸುವಂತೆ ಸಾರ್ವಜನಿಕರಿಗೂ ಅವರು ಮನವಿ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯಾವುದೇ ಪ್ರದೇಶದಲ್ಲಿ ಕಸ ರಾಶಿಯಾಗಿದ್ದರೆ ಅಥವಾ ಆಟೋ ಟಿಪ್ಪರ್ ಸಮಯಕ್ಕೆ ಬಾರದಿದ್ದರೆ ತಕ್ಷಣ ನಿಗಮಕ್ಕೆ ಮಾಹಿತಿ ನೀಡಿ. ಮಾಹಿತಿ ಬಂದ ಕೂಡಲೇ ನಿಗಮದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ನಗರದ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬೇಕಾದರೆ ಸಾರ್ವಜನಿಕರ ಸಕ್ರಿಯ ಸಹಭಾಗಿತ್ವ ಅಗತ್ಯ. ನಾಗರಿಕರು ನಿಗಮದೊಂದಿಗೆ ಕೈಜೋಡಿಸಿದಾಗ ಮಾತ್ರ ತ್ಯಾಜ್ಯ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಸುಧಾರಿಸಲು ಸಾಧ್ಯ. ತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿರುವ ಸ್ವಯಂಸೇವಕರು ರಸ್ತೆ ಬದಿಯಲ್ಲಿ ಕಸ ಎಸೆಯದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ಬಗ್ಗೆ ತಕ್ಷಣ ನಿಗಮದ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ದಂಡ ವಿಧಿಸಲಾಗುವುದು ಎಂದು ಕೂಡ ಅವರು ಎಚ್ಚರಿಸಿದ್ದಾರೆ.

ಕಸ ಸಂಗ್ರಹಕ್ಕೆ ಜಿಬಿಎಯ ವಾಹನಗಳು ಸರಿಯಾಗಿ ಬರಲ್ಲ ಎಂಬ ಆರೋಪವೂ ಇರುವ ಕಾರಣ ತಂತ್ರಜ್ಞಾನ ಬಳಸಿ ಇವುಗಳ ಓಡಾಟ ನಿರ್ವಹಣೆಗೆ ಜಿಬಿಎ ಮುಂದಾಗಿದೆ. ‘ಮಾತ್ರ’ ಎಂಬ ಆ್ಯಪ್ ಮೂಲಕ ಕಸದ ವಾಹನಗಳ ಚಲನವಲನ ಗಮನಿಸಿಲು ನಿರ್ಧರಿಸಿದೆ. ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಕೋರಮಂಗಲದಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೆ ತರಲಾಗಿದೆ. ಕಸದ ವಾಹನಗಳ ಚಾಲಕರ ಮೊಬೈಲ್​​ನಲ್ಲಿ ‘ಮಾತ್ರ’ ಆ್ಯಪ್ ಇನ್ಸ್ಟಾಲ್ ಮಾಡಲಾಗಿದ್ದು, ಅವರು ಕಸ ಸಂಗ್ರಹಣೆ ಮಾಡುವ ಮಾರ್ಗ ತಪ್ಪಿಸಿದರೆ ಈ ಆ್ಯಪ್ ಮೂಲಕ ಅಧಿಕಾರಿಗಳು ತಿಳಿದುಕೊಳ್ಳಬಹುದಾಗಿದೆ. ಈ ವ್ಯವಸ್ಥೆ ಯಶಸ್ವಿಯಾದರೆ ಉಳಿದ ನಾಲ್ಕೂ ನಗರ ಪಾಲಿಕೆಗಳಿಗೂ ಈ ವ್ಯವಸ್ಥೆಯನ್ನ ವಿಸ್ತರಿಸುವ ಚಿಂತನೆ ಕೂಡ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular