HomeKarnatakaಬೆಂಗಳೂರು ಅನಧಿಕೃತ ಮನೆಗಳ ಮಾಲೀಕರಿಗೆ ಬಿಗ್ ರಿಲೀಫ್‌: BDA ಶುಲ್ಕ ಅರ್ಧಕ್ಕೆ ಇಳಿಕೆ

ಬೆಂಗಳೂರು ಅನಧಿಕೃತ ಮನೆಗಳ ಮಾಲೀಕರಿಗೆ ಬಿಗ್ ರಿಲೀಫ್‌: BDA ಶುಲ್ಕ ಅರ್ಧಕ್ಕೆ ಇಳಿಕೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬಿಡಿಎ (BDA) ಸ್ವಾಧೀನಪಡಿಸಿಕೊಂಡ ಜಾಗಗಳಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡಿದ್ದ ಲಕ್ಷಾಂತರ ಸಾರ್ವಜನಿಕರಿಗೆ ರಾಜ್ಯ ಸರ್ಕಾರ ಭಾರಿ ಸಿಹಿಸುದ್ದಿ ನೀಡಿದೆ. ಈ ಮನೆಗಳನ್ನು ಸಕ್ರಮಗೊಳಿಸಲು ನಿಗದಿಪಡಿಸಲಾಗಿದ್ದ ಸಕ್ರಮ ಶುಲ್ಕವನ್ನು ಶೇಕಡಾ 50 ರಷ್ಟು ಕಡಿತಗೊಳಿಸುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ-2026 ಸೇರಿದಂತೆ ಒಟ್ಟು ಮೂರು ಪ್ರಮುಖ ಮಸೂದೆಗಳು ಗುರುವಾರ ವಿಧಾನಸಭೆಯಲ್ಲಿ ಅಂಗೀಕಾರಗೊಂಡವು.

ಮುಖ್ಯಮಂತ್ರಿಗಳ ಪರವಾಗಿ ವಿಧೇಯಕ ಮಂಡಿಸಿದ ಸಚಿವ ಕೃಷ್ಣ ಬೈರೇಗೌಡ ಅವರು, ಬಿಡಿಎ ಸ್ವಾಧೀನದಲ್ಲಿರುವ, ಅಭಿವೃದ್ಧಿ ಯೋಜನೆಗೆ ಬಳಸಲು ಸಾಧ್ಯವಾಗದ ಜಾಗಗಳಲ್ಲಿ ನಿರ್ಮಾಣವಾಗಿರುವ ಮನೆಗಳಿಗೆ 2020 ರ ಕಾಯ್ದೆಯನ್ವಯ ಷರತ್ತಿಗೊಳಪಟ್ಟು ಹಂಚಿಕೆ ಮಾಡಲು ಅವಕಾಶವಿತ್ತು. ಆದರೆ ಸದ್ಯದ ಮಾರ್ಗಸೂಚಿ ಮೌಲ್ಯದಡಿ ನಿಗದಿಯಾಗಿದ್ದ ಶುಲ್ಕ ಹೆಚ್ಚಿದ್ದರಿಂದ ಸಾರ್ವಜನಿಕರಿಗೆ ಕಷ್ಟವಾಗುತ್ತಿತ್ತು. ಹೀಗಾಗಿ ಶುಲ್ಕವನ್ನು ಶೇ. 50 ರಷ್ಟು ಇಳಿಕೆ ಮಾಡಲಾಗುತ್ತಿದೆ ಎಂದು ಚರ್ಚೆಯ ವೇಳೆ ವಿವರಿಸಿದರು.

ಈ ನಿರ್ಧಾರದಿಂದಾಗಿ ಬೆಂಗಳೂರಿನ ಸುಮಾರು 1.11 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ನೇರ ಅನುಕೂಲವಾಗಲಿದ್ದು, 4 ಸಾವಿರ ಚದರ ಅಡಿ ಮೀರದ ಸ್ವತ್ತುಗಳಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ. ಆಸ್ತಿ ಮಾಲೀಕರಿಗೆ ಇದು ಒಮ್ಮೆಯ ಅವಕಾಶವಾಗಿದ್ದು, ಕೇವಲ 2 ವರ್ಷಗಳ ಅವಧಿಗೆ ಮಾತ್ರ ಲಭ್ಯವಿರಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಸ್ತಿಯ ವಿಸ್ತೀರ್ಣಕ್ಕೆ ತಕ್ಕಂತೆ ಪರಿಷ್ಕೃತ ಸಕ್ರಮ ಶುಲ್ಕದ ವಿವರ:

20×30 ಅಡಿ ನಿವೇಶನ: ಮಾರ್ಗಸೂಚಿ ಮೌಲ್ಯದ (Guidance Value) ಶೇ. 10 ರ ಬದಲಿಗೆ ಶೇ. 5 ಕ್ಕೆ ಇಳಿಕೆ.

20×30 ಕ್ಕಿಂತ ಹೆಚ್ಚು – 30×40 ಅಡಿವರೆಗೆ: ಶೇ. 25 ರ ಬದಲಿಗೆ ಶೇ. 12.5 ಕ್ಕೆ ಇಳಿಕೆ.

30×40 ಕ್ಕಿಂತ ಹೆಚ್ಚು – 40×60 ಅಡಿವರೆಗೆ: ಶೇ. 40 ರ ಬದಲಿಗೆ ಶೇ. 20 ಕ್ಕೆ ಇಳಿಕೆ.

40×60 ಕ್ಕಿಂತ ಹೆಚ್ಚು – 50×80 ಅಡಿವರೆಗೆ: ಶೇ. 50 ರ ಬದಲಿಗೆ ಶೇ. 25 ಕ್ಕೆ ಇಳಿಕೆ.

ಬಿಡಿಎ ಆಯುಕ್ತರಿಗೆ ಅಧಿಕಾರ ಹೆಚ್ಚಳ:

ಬಿಡಿಎ ಬಡಾವಣೆಗಳು, ಫ್ಲ್ಯಾಟ್‌ಗಳು ಹಾಗೂ ವಿಲ್ಲಾಗಳ ದುರಸ್ತಿ ಮತ್ತು ನಿರ್ವಹಣೆ ಕಾಮಗಾರಿಗಳ ವಿಳಂಬ ತಪ್ಪಿಸಲು ಆಯುಕ್ತರ ಆಡಳಿತಾತ್ಮಕ ಸಾಲದ ಮಿತಿಯನ್ನು ಹೆಚ್ಚಿಸಲಾಗಿದೆ. ಇನ್ಮುಂದೆ ಆಯುಕ್ತರು ಬಿಡಿಎ ಬೋರ್ಡ್ ಅನುಮತಿಯಿಲ್ಲದೆಯೇ ₹5 ಕೋಟಿವರೆಗೆ ತುರ್ತು ಕೆಲಸಗಳಿಗೆ ಆರ್ಥಿಕ ಮಂಜೂರಾತಿ ನೀಡಬಹುದು. ಈ ಮೊದಲು ಈ ಮಿತಿ ಕೇವಲ ₹50 ಲಕ್ಷದವರೆಗೆ ಮಾತ್ರ ಇತ್ತು.

ಅಂಗೀಕಾರಗೊಂಡ ಇತರ ಎರಡು ಪ್ರಮುಖ ಮಸೂದೆಗಳು:

ನಾಡಪ್ರಭು ಕೆಂಪೇಗೌಡ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ-2026:

ಪ್ರಾಧಿಕಾರದ ಉಪಾಧ್ಯಕ್ಷರನ್ನಾಗಿ ಕಂದಾಯ ಸಚಿವರು ಅಥವಾ ಉಪ ಮುಖ್ಯಮಂತ್ರಿಗಳನ್ನು ನೇಮಿಸಲು ಅವಕಾಶ ನೀಡಲಾಗಿದೆ.

ಬೆಂಗಳೂರು ನಗರ, ಗ್ರಾಮಾಂತರ ಹಾಗೂ ದಕ್ಷಿಣ ಜಿಲ್ಲೆಗಳ ಉಸ್ತುವಾರಿ ಸಚಿವರು ಬೋರ್ಡ್ ಸದಸ್ಯರಾಗಲಿದ್ದು, ಕೆಂಪೇಗೌಡರ ಇತಿಹಾಸ ತಜ್ಞರಿಗೆ ಸರ್ಕಾರೇತರ ಸದಸ್ಯರಾಗಿ ಅವಕಾಶ ಕಲ್ಪಿಸಲಾಗಿದೆ.

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ವಿಧೇಯಕ-2026:

2005 ರಿಂದ 2015 ರ ಅವಧಿಯಲ್ಲಿ ಅನುಮೋದನೆ ಪಡೆದು, ಕಾಮಗಾರಿ ಪೂರ್ಣಗೊಳಿಸದೆ ಬಾಕಿ ಉಳಿಸಿಕೊಂಡಿರುವ ಲೇಔಟ್‌ಗಳ ಮೇಲೆ ದಂಡ ವಿಧಿಸಲು ಕಾನೂನು ತಿದ್ದುಪಡಿ ತರಲಾಗಿದೆ.

ಲೇಔಟ್ ಅಭಿವೃದ್ಧಿ ಪೂರ್ಣಗೊಳ್ಳುವವರೆಗೆ ಬಿಡುಗಡೆಯಾಗಬೇಕಾದ ನಿವೇಶನಗಳ ಮಾರ್ಗಸೂಚಿ ಮೌಲ್ಯದ ಮೇಲೆ ಪ್ರತಿ ವರ್ಷ ಶೇ. 3 ರಷ್ಟು ದಂಡ ವಿಧಿಸಲಾಗುತ್ತದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular