HomeLive Newsರಾಜಸ್ಥಾನದಲ್ಲಿ ಲಂಚ ಪಡೆದು ಸಿಕ್ಕಿಬಿದ್ದ ಬೆಂಗಳೂರು ಪೊಲೀಸರು

ರಾಜಸ್ಥಾನದಲ್ಲಿ ಲಂಚ ಪಡೆದು ಸಿಕ್ಕಿಬಿದ್ದ ಬೆಂಗಳೂರು ಪೊಲೀಸರು

ಬೆಂಗಳೂರು: ವರದಕ್ಷಿಣೆ ಕಿರುಕುಳ ಆರೋಪಿಯಿಂದ ಲಂಚ ಪಡೆಯುತ್ತಿದ್ದ ಆರೋಪದ ಮೇರೆಗೆ ಬೆಂಗಳೂರಿನ ಹೆಚ್ಎಎಲ್ ಪೊಲೀಸ್ ಠಾಣೆಯ ಮಹಿಳಾ ಸಬ್ ಇನ್ಸ್ಪೆಕ್ಟರ್ ಸೇರಿ ಮೂವರು ಪೊಲೀಸರನ್ನು ರಾಜಸ್ಥಾನ ಭ್ರಷ್ಟಾಚಾರ ನಿಗ್ರಹದಳ(ಎಸಿಬಿ) ಬಂಧಿಸಿದೆ.

ಪಿಎಸ್ಐ ಕೆ. ಅನಿತಾ, ಹೆಡ್ ಕಾನ್ಸ್ಟೇಬಲ್ ಗಳಾದ ಉಳವಪ್ಪ ತೇಗೂರು ಮತ್ತು ಯತೀಶ್ ಬಂಧಿತರು. ರಾಜಸ್ಥಾನ ಮೂಲದ ವ್ಯಕ್ತಿ ವಿರುದ್ಧ ಬೆಂಗಳೂರಿನಲ್ಲಿ ವರದಕ್ಷಿಣೆ ಕಿರುಕುಳ ದೂರು ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಲು ಹೆಚ್ಎಎಲ್ ಠಾಣೆ ಪೊಲೀಸರು ಜೈಪುರಕ್ಕೆ ತೆರಳಿದ್ದರು. ಅಲ್ಲಿ ಎರಡು ಲಕ್ಷ ರೂಪಾಯಿ ನೀಡಿದರೆ ಕ್ಲೀನ್ ಚಿಟ್ ನೀಡುವುದಾಗಿ ಆರೋಪಿಗೆ ಆಫರ್ ಮಾಡಿದ್ದರು. ಈ ಬಗ್ಗೆ ಆರೋಪಿ ಎಸಿಬಿಗೆ ದೂರು ನೀಡಿದ್ದು, ಲಂಚದ ಹಣ ಸ್ವೀಕರಿಸುವಾಗ ದಾಳಿ ನಡೆಸಿದ ರಾಜಸ್ಥಾನ ಎಸಿಬಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದೆ.

ಹೆಚ್ಎಎಲ್ ಪೊಲೀಸ್ ಠಾಣೆಯ ಮಹಿಳಾ ಸಬ್ ಇನ್ಸ್ಪೆಕ್ಟರ್ ಕೆ. ಅನಿತಾ, ಹೆಡ್ ಕಾನ್ಸ್ಟೇಬಲ್ ಉಳವಪ್ಪ ತೇಗೂರು ಮತ್ತು ಕಾನ್ಸ್ಟೇಬಲ್ ಯತೀಶ್ ಅವರನ್ನು ಲಂಚ ಪಡೆದ ಆರೋಪದ ಮೇಲೆ ರಾಜಸ್ಥಾನದ ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವರದಕ್ಷಿಣೆ ಕಿರುಕುಳ ಪ್ರಕರಣದ ತನಿಖೆಗಾಗಿ ಜೂನ್ 12ರಂದು ರಾಜಸ್ಥಾನದ ಜೈಪುರಕ್ಕೆ ಹೋಗಿದ್ದರು. ಈ ಪ್ರಕರಣದಿಂದ ಆರೋಪಿ ಮತ್ತು ಆತನ ಕುಟುಂಬ ಸದಸ್ಯರನ್ನು ಕೈಬಿಡಲು 2 ಲಕ್ಷ ರೂಪಾಯಿ ಕೊಡುವಂತೆ ಎಸ್ಐ ಅನಿತಾ ಮತ್ತು ಸಿಬ್ಬಂದಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಆರೋಪಿಯ ಕುಟುಂಬ ರಾಜಸ್ಥಾನ ಎಸಿಬಿಗೆ ದೂರು ನೀಡಿದ್ದು, ಇದನ್ನು ಆಧರಿಸಿ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.

ಜೈಪುರದ ಹೋಟೆಲ್ ನಲ್ಲಿ ಲಂಚದ ಭಾಗವಾಗಿ 40,000 ರೂ. ಪಡೆಯುತ್ತಿದ್ದಾಗ ಉಳವಪ್ಪ ತೇಗೂರು ಅವರನ್ನು ಹಣದ ಸಮೇತ ಬಂಧಿಸಿದ್ದಾರೆ. ವಿಚಾರಣೆಯ ವೇಳೆ ಪ್ರಕರಣದಲ್ಲಿ ಎಸ್ಐ ಅನಿತಾ ಮತ್ತು ಕಾನ್ಸ್ಟೇಬಲ್ ಯತೀಶ್ ಪಾತ್ರ ಇರುವುದಾಗಿ ಉಳವಪ್ಪ ತೇಗೂರು ತಿಳಿಸಿದ್ದಾರೆ. ಹೀಗಾಗಿ ಎಸಿಬಿ ಅಧಿಕಾರಿಗಳು ಅನಿತಾ ಮತ್ತು ಯತೀಶ್ ಅವರನ್ನು ಕೂಡ ಬಂಧಿಸಿದ್ದಾರೆ.

ಆರೋಪಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಲಂಚದ ಬೇಡಿಕೆ, ಕರೆ ವಿವರ, ಹಣಕಾಸು ವ್ಯವಹಾರದ ಮಾಹಿತಿ ಸೇರಿ ಎಲ್ಲಾ ವಿಧದಲ್ಲಿಯೂ ಎಸಿಬಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular