ಬೆಂಗಳೂರು: ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹಾರಗದ್ದೆ ಗ್ರಾಮದಲ್ಲಿ ಅಕ್ರಮವಾಗಿ ನೆಲೆಸಿದ್ದರು. ವೀಸಾ ಅವಧಿ ಮುಗಿದಿದ್ದರೂ ಬೆಂಗಳೂರಿನಲ್ಲಿಯೇ ಅಕ್ರಮವಾಗಿ ನೆಲೆಸಿದ್ದರು. ಬಾಂಗ್ಲಾ ವಲಸಿಗರು ವಾಸವಾಗಿದ್ದಾರೆ ಎಂಬ ಬಗ್ಗೆ ಪೊಲೀಸರಿಗೆ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಜಿಗಣಿ ಪೊಲೀಸರು ಪರಿಶೀಲನೆಗೆ ತೆರಳಿದ್ದಾಗ ನೈಜೀರಿಯಾ ಪ್ರಜೆಗಳು ವೀಸಾ ಅವಧಿ ಮುಗಿದರೂ ಇಲ್ಲಿಯೇ ವಾಸವಾಗಿರುವುದು ಬೆಳಕಿಗೆ ಬಂದಿದೆ.
ಡೊಮ್ಯಾರೋ (34) ಹಾಗೂ ಮಾನ್ಯುಯಲ್ ನಾಜುಬಿ(32) ಬಂಧಿತ ಆರೋಪಿಗಳು. ಸ್ಟೂಡೆಂಟ್ ವೀಸಾದಲ್ಲಿ ಬಂದಿದ್ದ ಇಬ್ಬರೂ ವೀಸಾ ಅವಧಿ ಮುಗಿದರೂ ಜಿಗಣಿ ಬಳಿ ಅಕ್ರಮವಾಗಿ ವಾಸವಾಗಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದು, ತನಿಖೆ ಮುಂದುವರೆಸಿದ್ದಾರೆ.

