ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ಮೂಲಕ ಪರಿಚಯ ಮಾಡಿಕೊಂಡು ಯುವಕ, ಯುವತಿಯರು ವಂಚಿಸುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಇಲ್ಲೋರ್ವ ವ್ಯಕ್ತಿ ಬೆಂಗಳೂರಿನ ವೈದ್ಯೆಯೊಬ್ಬರಿಗೆ ಇದೇ ಮ್ಯಾಟ್ರಿಮೋನಿಯಲ್ ಮೂಲಕ ಪರಿಚಯನಾಗಿ, 22 ಲಕ್ಷ ರೂಪಾಯಿಗೂ ಅಧಿಕ ವಂಚನೆ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ರಿಚರ್ಡ್ಸ್ ಟೌನ್ ನಿವಾಸಿಯಾಗಿರುವ ವೈದ್ಯೆ ನೀಡಿದ ದೂರಿನ ಪ್ರಕಾರ, 2025ರ ಡಿಸೆಂಬರ್ 20ರಂದು ಮ್ಯಾಟ್ರಿಮೋನಿಯಲ್ ಪೋರ್ಟಲ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಕೆಲವೇ ದಿನಗಳಲ್ಲಿ ತಾನು ಡಾ. ಗಣೇಶ್ ಬರ್ಮನ್ ಎಂದು ಪರಿಚಯಿಸಿಕೊಂಡ ವ್ಯಕ್ತಿ, ವೈದ್ಯೆಯ ಜೊತೆಗೆ ವಿಶ್ವಾಸ ಗಳಿಸಿದ್ದ ಬಳಿಕ ಹಂತ ಹಂತವಾಗಿ ಬರೋಬ್ಬರಿ 22 ಲಕ್ಷಕ್ಕೂ ಅಧಿಕ ಹಣವನ್ನು ಪಡೆದು ವಂಚಿಸಿದ್ದಾನೆ.
ತಾನು ಜರ್ಮನಿಯ ಬರ್ಲಿನ್‌ನಲ್ಲಿ ನೆಲೆಸಿರುವ ನೇತ್ರ ತಜ್ಞ ಎಂದು ಆತ ಹೇಳಿಕೊಂಡಿದ್ದ. ದೂರವಾಣಿ ಸಂಖ್ಯೆಯನ್ನು ಕೂಡ ವೈದ್ಯೆಯ ಜೊತೆಗೆ ಹಂಚಿಕೊಂಡಿದ್ದ. ತಾನು ವಿಚ್ಛೇದಿತನಾಗಿದ್ದು ಜರ್ಮನಿಯಲ್ಲಿ ವಾಸಿಸುತ್ತಿದ್ದೇನೆ. ತನ್ನ ಏಳು ವರ್ಷದ ಮಗಳು ಬೋರ್ಡಿಂಗ್ ಶಾಲೆಯಲ್ಲಿ ಓದುತ್ತಿದ್ದು, ಪೋಷಕರು ಇಂಗ್ಲೆಂಡ್‌ನಲ್ಲಿದ್ದಾರೆ. ತಾನು ಅವರ ಏಕೈಕ ಪುತ್ರ ಎಂದು ಸಂತ್ರಸ್ತ ವೈದ್ಯೆಗೆ ತಿಳಿಸಿದ್ದ. ಅಲ್ಲದೆ, 2026ರ ಫೆಬ್ರವರಿಯ ವೇಳೆಗೆ ಭಾರತಕ್ಕೆ ಮರಳಿ ದೆಹಲಿಯಲ್ಲಿ ಆಸ್ಪತ್ರೆ ಆರಂಭಿಸುವ ಯೋಜನೆ ಹೊಂದಿರುವುದಾಗಿಯೂ ಆತ ಹೇಳಿದ್ದನಂತೆ.
ಹೀಗೆ ಇಬ್ಬರ ನಡುವೆ ಆರಂಭವಾದ ಪರಿಚಯ, ಸ್ನೇಹದಿಂದ ಇಬ್ಬರೂ ವಾಟ್ಸ್ಆ್ಯಪ್ ಕರೆಗಳು ಹಾಗೂ ಚಾಟ್‌ಗಳ ಮೂಲಕ ಸಂವಹನ ನಡೆಸಲಾರಂಭಿಸಿದ್ದರು. ಕಾಲ ಕ್ರಮೇಣ ಆರೋಪಿ ಮದುವೆ ವಿಚಾರ ಹಾಗೂ ಭಾರತದಲ್ಲಿ ಆಸ್ಪತ್ರೆ ಆರಂಭಿಸುವ ತನ್ನ ಮಹತ್ವಾಕಾಂಕ್ಷೆಯ ಯೋಜನೆಗಳ ಬಗ್ಗೆ ಮಾತನಾಡುವ ಮೂಲಕ ವೈದ್ಯೆಗೆ ಇನ್ನಷ್ಟು ಹತ್ತಿರದವನಂತಾಗಿದ್ದ.
ವೈದ್ಯೆ ಕೂಡ ಆತನ ಮಾತುಗಳನ್ನು ನಂಬಿದ್ದರು. ಯಾವಾಗ ವೈದ್ಯೆ ತನ್ನ ಮಾಅತುಗಳನ್ನು ಸಂಪೂರ್ಣವಾಗಿ ನಂಬಿದ್ದಾರೆ ಎಂಬುದು ತಿಳಿದ ಆಸಾಮಿ, ತನ್ನ ವಂಚನೆಯ ಆಟ ಶುರುಮಾಡಿದ್ದ. ತನ್ನ ಅಂತಾರಾಷ್ಟ್ರೀಯ ಬ್ಯಾಂಕ್ ಖಾತೆ ಇದ್ದಕ್ಕಿದ್ದಂತೆ ಕಾರ್ಯನಿರ್ವಹಿಸುತ್ತಿಲ್ಲ. ಆಸ್ಪತ್ರೆ ಯೋಜನೆಗಾಗಿ ಭಾರತದಲ್ಲಿರುವ ಏಜೆಂಟ್‌ಗಳಿಗೆ ಹಣ ವರ್ಗಾವಣೆ ಮಾಡುತ್ತಿದ್ದ ವೇಳೆ ಈ ಸಮಸ್ಯೆ ಎದುರಾಗಿದೆ ಎಂದು ವೈದ್ಯೆಗೆ ತಿಳಿಸಿದ್ದ.
ಬ್ಯಾಂಕ್ ಖಾತೆಯ ಸಮಸ್ಯೆ ಬಗೆಹರಿಯುವವರೆಗೆ ತನ್ನ ಬದಲಿಗೆ ವಿವಿಧ ಏಜೆಂಟ್‌ಗಳ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸುವಂತೆ ವೈದ್ಯೆಯನ್ನು ಆತ ಕೇಳಿಕೊಂಡಿದ್ದಾನೆ. ಖಾತೆ ಸರಿಯಾದ ಬಳಿಕ ಹಣವನ್ನು ವಾಪಸ್ ನೀಡುವುದಾಗಿ ಭರವಸೆಯನ್ನೂ ನೀಡಿದ್ದಾನೆ.
ಆತನ ಮಾತನ್ನು ನಂಬಿ ವೈದ್ಯೆ 2026ರ ಜನವರಿ 9ರಿಂದ 24ರವರೆಗೆ ತಮ್ಮ ಬ್ಯಾಂಕ್ ಖಾತೆಯಿಂದ ವಿವಿಧ ಖಾತೆಗಳಿಗೆ ದೊಡ್ಡ ಮೊತ್ತದ ಹಣ ವರ್ಗಾಯಿಸಿದ್ದಾರೆ. ತಮ್ಮ ಖಾತೆಯಲ್ಲಿ ಸಾಕಷ್ಟು ಹಣ ಇಲ್ಲದ ಕಾರಣ, ಭಾವಮೈದುನನಿಂದಲೂ ಆರ್ಥಿಕ ನೆರವು ಪಡೆದಿದ್ದು, ಅವರೂ ತಮ್ಮ ಬ್ಯಾಂಕ್ ಖಾತೆಯಿಂದ ಹೆಚ್ಚುವರಿ ಹಣವನ್ನು ವರ್ಗಾಯಿಸಿದ್ದಾರೆ.
ಹೀಗೆ ಒಟ್ಟು 22.2 ಲಕ್ಷಕ್ಕೂ ಅಧಿಕ ಹಣ ವರ್ಗಾಯಿಸಿದ್ದಾರೆ. ಈ ಹಣವನ್ನು ಪಡೆದ ವಂಚಕ ಮತ್ತಷ್ಟು ಹಣದ ಅಗತ್ಯವಿದೆ ಎಂದಿದ್ದಾನೆ. ಈ ವೇಳೆ ವೈದ್ಯೆಗೆ ಅನುಮಾನ ಆರಂಭವಾಗಿದೆ. ಇಷ್ಟೊಂದು ಹಣ ಪಡೆದ ಬಳಿಕವೂ ಮತ್ತೆ ಹಣ ಕೇಳುತ್ತಿದ್ದಾನಲ್ಲ ಎಂದು ಪರಿಶೀಲಿಸಿದ ವೈದ್ಯೆಗೆ ಆತ ವಂಚಿಸುತ್ತಿರುವುದು ಅರಿವಾಗಿದೆ. ತಕ್ಷಣ ವೈದ್ಯೆ ಈ ಸಂಬಂಧ ಪೂರ್ವ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಒಟ್ಟಾರೆ ವೈದ್ಯೆಯನ್ನು ಮದುವೆಯಾಗುವುದಾಗಿಯೂ ಹೇಳಿದ್ದ ಸೈಬರ್ ವಂಚಕ 22.2 ಲಕ್ಷ ರೂಪಾಯಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಪ್ರಕರಣ ದಾಖಲಿಸಿಲೊಂಡಿರುವ ಸೈಬರ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.

