ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ಪ್ರಮುಖ ಯೋಜನೆ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಬಿಬಿಸಿ). ಈ ಯೋಜನೆ ಕುರಿತು ಮಹತ್ವದ ಅಪ್‌ಡೇಟ್ ಒಂದಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೈಗೊಂಡಿರುವ ಯೋಜನೆ ಇದಾಗಿದೆ.
ಬಿಡಿಎ ಮೂರು ಹಂತಗಳಲ್ಲಿ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಬಿಬಿಸಿ) ಯೋಜನೆಯನ್ನು ಜಾರಿಗೊಳಿಸಲಿದೆ. ಯೋಜನೆಯ ಮೊದಲ ಹಂತವಾಗಿ ತುಮಕೂರು-ಬಳ್ಳಾರಿ ರೋಡ್ ಪ್ಯಾಕೇಜ್‌ಗೆ ಮಾರ್ಚ್‌ನಲ್ಲಿ ಟೆಂಡರ್ ಕರೆಯಲಾಗುತ್ತದೆ.
ಈ ರಸ್ತೆ ಮಾದಾವರದ ಬಿಐಇಸಿ ಬಳಿ ಪ್ರಾರಂಭವಾಗಲಿದ್ದು, ಬಳ್ಳಾರಿ ರಸ್ತೆ ತನಕ ಸಾಗಲಿದೆ. ಈ ರಸ್ತೆ ನಮ್ಮ ಮೆಟ್ರೋ ವಿಮಾನ ನಿಲ್ದಾಣದ ಮಾರ್ಗದ ಬಳಿಕ ಅಂತ್ಯವಾಗಲಿದ್ದು, ಮೆಟ್ರೋ ಸಂಪರ್ಕಕ್ಕೂ ಸುಲಭವಾಗಲಿದೆ.
ಯೋಜನೆ ವಿವರ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಫೆರಿಫೆರಿಯಲ್ ರಿಂಗ್ ರೋಡ್ ಯೋಜನೆಯನ್ನು ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಎಂದು ಪುನರ್ ನಾಮಕರಣ ಮಾಡಿ ಜಾರಿಗೊಳಿಸುತ್ತಿದೆ. ಯೋಜನೆಯನ್ನು ವೇಗಗೊಳಿಸಲು ಈಗಾಗಲೇ ಪ್ರಮುಖ ತೀರ್ಮಾನ ಕೈಗೊಳ್ಳಲಾಗಿದೆ.
ಯೋಜನೆಯನ್ನು 3 ಹಂತವಾಗಿ ವಿಭಜನೆ ಮಾಡಲಾಗುತ್ತದೆ. ಇದರಿಂದಾಗಿ ಏಕಕಾಲದಲ್ಲಿ ಯೋಜನೆ ಕೈಗೆತ್ತಿಕೊಳ್ಳುವ ಬದಲು, ಅದನ್ನು ಹಲವು ಪ್ಯಾಕೇಜ್‌ಗಳಾಗಿ ವಿಭಜಿಸ ಒಂದೊಂದೆ ಪ್ಯಾಕೇಜ್ ಪೂರ್ಣಗೊಳಿಸಲಾಗುತ್ತದೆ.
ಬಿಬಿಸಿ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆಯು ಶೇ. 80ರಷ್ಟು ಪೂರ್ಣಗೊಂಡ ತಕ್ಷಣ ಆಯಾ ಹಂತಗಳಿಗೆ ಪ್ರತ್ಯೇಕವಾಗಿ ಟೆಂಡರ್‌ಗಳನ್ನು ಹೊರಡಿಸಲಾಗುತ್ತದೆ. ಮೊದಲು ತುಮಕೂರು ರಸ್ತೆ- ಬಳ್ಳಾರಿ ರಸ್ತೆ ನಡುವಿನ 23 ಕಿ.ಮೀ. ಉದ್ದದ ಮೊದಲ ಪ್ಯಾಕೇಜ್‌ಗೆ ಮಾರ್ಚ್‌ನಲ್ಲಿ ಟೆಂಡರ್ ಕರೆಯಲು ತಯಾರಿ ನಡೆಯುತ್ತಿದೆ.
ಭೂ ಸ್ವಾಧೀನ ಅಂತಿಮ ಹಂತದಲ್ಲಿದ್ದು, ಮಾರ್ಚ್‌ನಲ್ಲಿ ಟೆಂಡರ್ ಕರೆಯಲಾಗುತ್ತಿದೆ. ರಸ್ತೆ ಮಾದಾವರದ ಬೆಂಗಳೂರು ಅಂತರಾಷ್ಟ್ರೀಯ ಪ್ರದರ್ಶನ ಕೇಂದ್ರದಿಂದ ಪ್ರಾರಂಭವಾಗಲಿದ್ದು, ವೆಂಕಟಾಲದಲ್ಲಿರುವ ಕಾಲಿನ್ಸ್ ಏರೋಸ್ಪೇಸ್ ಪಾರ್ಕ್ ಪಕ್ಕದ ಬಳ್ಳಾರಿ ರಸ್ತೆಯನ್ನು ದಾಟಲಿದೆ.
ಅಧಿಕಾರಿಗಳ ಪ್ರಕಾರ ಈ ಯೋಜನೆಯನ್ನು ಹಂತ-ಹಂತವಾಗಿ ಜಾರಿಗೊಳಿಸಿದರೂ ಸಹ, ತುಮಕೂರು ರಸ್ತೆ ಮತ್ತು ಬಳ್ಳಾರಿ ರಸ್ತೆಯನ್ನು ಹೊಸ ರಸ್ತೆಯ ಮೂಲಕ ಸಂಪರ್ಕಿಸುವ ಮೂಲಕ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಮತ್ತು ತುಮಕೂರು ರಸ್ತೆಯಲ್ಲಿನ ಸಂಚಾರ ದಟ್ಟಣೆಯನ್ನು, ಅದರಲ್ಲೂ ವಿಶೇಷವಾಗಿ ಹೆಬ್ಬಾಳ ಜಂಕ್ಷನ್‌ನಲ್ಲಿನ ದಟ್ಟಣೆಯನ್ನು ಕಡಿಮೆ ಮಾಡಲಾಗುತ್ತದೆ.
ಈ ರಸ್ತೆಯು ಟೋಲ್ ವ್ಯವಸ್ಥೆಯನ್ನು ಹೊಂದಿರಲಿದೆ. ಈ 23 ಕಿ.ಮೀ. ಉದ್ದದ ರಸ್ತೆ ನಿರ್ಮಾಣಕ್ಕೆ ಒಟ್ಟು 576 ಎಕರೆ 38 ಗುಂಟೆ ಭೂಮಿಯ ಅಗತ್ಯವಿದೆ. ಈ ಪೈಕಿ, ತುಮಕೂರು ರಸ್ತೆಯಿಂದ ಬಳ್ಳಾರಿ ರಸ್ತೆಯವರೆಗಿನ ಭಾಗದಲ್ಲಿ ಬಿಡಿಎ ಇದುವರೆಗೆ 308 ಎಕರೆ ಭೂಮಿಯನ್ನು ವಶಕ್ಕೆ ಪಡೆದುಕೊಂಡಿದೆ. ಇದರಲ್ಲಿ ಕೆಲವು ಸರ್ಕಾರಿ ಭೂಮಿಯೂ ಸೇರಿದ್ದು, ಒಟ್ಟಾರೆಯಾಗಿ ನಿಗದಿತ ಗುರಿಯ ಶೇ. 50ಕ್ಕಿಂತ ಹೆಚ್ಚು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿದಂತಾಗಿದೆ.

