ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವ ಆರಂಭವಾಗಿದೆ. ಆದರೆ ಕರಗ ಮಹೋತ್ಸವಕ್ಕೆ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.
ಕರಗ ಮಹೋತ್ಸವದ ಪೂಜಾರಿ ಜ್ಞಾನೇಂದ್ರ ಹೇಳುವ ಪ್ರಕಾರ ಈವರೆಗೂ ಒಂದೇ ಒಂದು ರೂಪಾಯಿ ಹಣ ಬಂದಿಲ್ಲ. ನಾನು ನನ್ನ ಸ್ವಂತ ಹಣದಿಂದ ಕರಗ ಮಹೋತ್ಸವಕ್ಕೆ ಅಲಂಕಾರ ಮಾಡಿದ್ದೇನೆ. ನಾನು 20 ಲಕ್ಷ ಹಣ ಖರ್ಚು ಮಾಡಿ ಮಾಡುತ್ತಿದ್ದೇನೆ ಎಂದಿದ್ದಾರೆ.
ಇತಿಹಾಸ ಪ್ರಸಿದ್ಧವಾಗಿರುವ ಕರಗ ಮಹೋತ್ಸವದಲ್ಲಿ ಇದೇ ಮೊದಲ ಬಾರಿಗೆ ಅರ್ಚಕರೇ ಹಣ ಹಾಕಿ ಜಾತ್ರೆ ನಡೆಸುತ್ತಿದ್ದಾರೆ. ಈವರೆಗೂ ಒಂದು ರೂಪಾಯಿ ಹಣವನ್ನು ಕರಗ ಮಹೋತ್ಸವಕ್ಕೆ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
ಕರಗ ಮಹೋತ್ಸವಕ್ಕೆ ಹಣ ಬಿಡುಗಡೆಯಾಗಿಲ್ಲ ಎಂಬ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಬೆಂಗಳೂರು ಕರಗ ಮಹೋತ್ಸವಕ್ಕೆ ಹಣ ಬಿಡುಗಡೆ ಮಾಡಲಾಗಿದೆ. ಬಜೆಟ್ ನಲ್ಲಿ ಕೂಡ ಅನುದಾನ ಮೀಸಲಿಟ್ಟಿದ್ದೇವೆ ಎಂದಿದ್ದಾರೆ.
ಅನಗತ್ಯವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಅವರಲ್ಲಿಯೇ ಎರಡು, ಮೂರು ಗುಂಪುಗಳಿವೆ. ಎಲ್ಲರೂ ಒಗ್ಗಟ್ಟಿನಿಂದ ಬರಬಹುದಿತ್ತು. ಯಾರು ಅರ್ಜಿ ಕೊಟ್ಟಿದ್ದಾರೋ ಅವರಿಗೆ ಹಣ ಕೊಟ್ಟಿದ್ದೇವೆ. ಹಣ ಬಿಡುಗಡೆಯಾಗಿಲ್ಲ ಎಂಬುದು ಸುಳ್ಳು ಎಂದು ಹೇಳಿದರು.