ಬೆಳಗಾವಿ: ಮನುಷತ್ವ, ಮಾನವೀಯತೆಯನ್ನೂ ಮರೆತು ಸಂಬಂಧಗಳ ಮೌಲ್ಯವೇ ಇಲ್ಲವೆಂಬಂತೆ ನಾವಿಂದು ಬುದುಕುತ್ತಿದ್ದೇವೆ…ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿರುವ ಕೋಟ್ಯಾಧಿಪತಿ ವೃದ್ಧ ತಂದೆಯ ಸ್ಥಿತಿ ಕಂಡು ಪೊಲೀಸರೇ ಅರೆಕ್ಷಣ ಕಣ್ಣೀರಾಗಿದ್ದಾರೆ.
72 ವರ್ಷದ ವೃದ್ಧರು ಪಾರ್ಶ್ವವಾಯು ಪೀಡಿತರಾಗಿ ಸಾವನ್ನಪ್ಪಿದ್ದಾರೆ. ವಿದೇಶದಲ್ಲಿರುವ ಮಕ್ಕಳಿಗೆ ಕರೆ ಮಾಡಿ ವಿಷಯ ತಿಳಿಸಿದರೂ ಯಾರೊಬ್ಬರೂ ಅಂತ್ಯ ಸಂಸ್ಕಾರಕ್ಕೆ ಬಂದಿಲ್ಲ. ಹೆತ್ತ ಮಗಳು ಪೊಲೀಸರಿಗೆ ಸಾಧ್ಯವಾದರೇ ನೀವೇ ಅಂತ್ಯಸಂಸ್ಕಾರ ಮಾಡಿ ಇಲ್ಲದಿದ್ದರೆ ಶವವನ್ನು ಬಿಸಾಕಿ ಎಂದು ಮನುಷತ್ವವಿಲ್ಲದಂತೆ ಮಾತನಾಡಿದ್ದಾಳೆ. ಈ ಮಾತುಗಳನ್ನು ಕೇಳಿದ ಪೊಲೀಸರಿಗೆ ಅರೆಕ್ಷಣ ಹೃದಯವೇ ನಿಂತ ಸ್ಥಿತಿ…ಅನಾಥ ಶವವಾಗಿರುವ ವೃದ್ಧನ ಸ್ಥಿತಿ ಕಂಡು ತಾವೇ ಅಂತ್ಯಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.
ಒಂದೂವರೆ ತಿಂಗಳ ಹಿಂದೆ ಚಿಕ್ಕೋಡಿ ತಾಲ್ಲೂಕಿನ ನಾಗರಮುನ್ನೊಳಿಯ ಶಿವನೇರಿ ಲಾಡ್ಜ್ ನಲ್ಲಿ ಚಿಕಿತ್ಸೆಗೆ ಎಂದು 72 ವರ್ಷದ ವೃದ್ಧನನ್ನು ತಂದು ಯಾರೋ ಇಕ್ಲಿಯೇ ಬಿಟ್ಟು ಹೋಗಿದ್ದಾರೆ. ಮಾಹಿತಿ ತಿಳಿದ ಚಿಕ್ಕೋಡಿ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ವಿಚಾರಿಸಿದಾಗ ಲಾಡ್ಜ್ ನವರು, ಮೂಲಚಂದ್ರ ಶರ್ಮಾ ಎನ್ನುವ ಪುನಾ ಮೂಲದ ವ್ಯಕ್ತಿ ಪಾರ್ಶ್ವವಾಯುಗೆ ಚಿಕಿತ್ಸೆಗೆ ಎಂದು ಅವರನ್ನು ನೋಡಿಕೊಳ್ಲುತ್ತಿದ್ದ ವ್ಯಕ್ತಿ ಕರೆತಂದು ಬಳಿಕ ಇಲ್ಲಿಯೇ ಬಿಟ್ಟು ಹೋಗಿದ್ದಾರೆ ಎಂದು ತಿಳಿಸಿದ್ದಾರೆ. ಇಂಗ್ಲಿಷ್, ಹಿಂದಿ , ಮರಾಠಿ ಹಲವು ಭಾಷೆಗಳಲ್ಲಿ ಸ್ಪಷ್ಟವಾಗಿ ಮಾತನಾಡುತ್ತಾರೆ ವೃದ್ಧ. ಆದರೆ ಪಾರ್ಶ್ವವಾಯು ರೋಗದಿಂದ ಬಳಲುತ್ತಿದ್ದು ಏಳಲು ಸಾಧ್ಯವಾಗುತ್ತಿಲ್ಲ. ಇದನ್ನು ಕಂಡು ಪೊಲೀಸರು ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಿದ್ದಾರೆ. ಈ ವೇಳೆ ವೃದ್ಧ ಸರ್ ನಾನು ಅಂತಿಂಥ ವ್ಯಕ್ತಿಯಲ್ಲ ನನ್ನ ಮಗಳು ಕೆನಡಾದಲ್ಲಿ ಹಾಗೂ ಮಗ ದಕ್ಷಿಣ ಆಫ್ರಿಕಾದಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದಾರೆ ಮತ್ತು ನಾನು ನಿವೃತ್ತ ಬ್ಯಾಂಕ್ ಮ್ಯಾನೇಜರ್ ಎಂದು ತಿಳಿಸಿದ್ದಾರೆ.
ಚಿಕ್ಕೋಡಿ ಪೊಲೀಸರು ಲಾಡ್ಜ್ ಮಾಲೀಕನನ್ನು ಮತ್ತೆ ವಿಚರಿಸಿದಾಗ, ಒಬ್ಬ ವ್ಯಕ್ತಿ ಕಾರ್ ನಲ್ಲಿ ಇವರನ್ನು ನಾಗರಮುನ್ನೊಳಿ ಕುಂಬಾರ ಆಸ್ಪತ್ರೆಗೆ ಪಾರ್ಶ್ವವಾಯು ಚಿಕಿತ್ಸೆಗೆ ಕರೆತಂದು ಬಳಿಕ ಇಲ್ಲಿಯೇ ಬಿಟ್ಟು ಹೋಗಿದ್ದಾರೆ. ಆ ವ್ಯಕ್ತಿ ಅವರ ಸಂಬಂಧಿಕ ಎಂದು ಭಾವಿಸಿದ್ದೆವು. ಆದರೆ ಆತ ಗುತ್ತಿಗೆ ಆಧಾರದ ಮೇಲೆ ಅವರನ್ನು ಆರೈಕೆ ಮಾಡುವ ಕೆಲಸಗಾರನಂತೆ. ನಿನ್ನೆ ರಾತ್ರಿ ಅವನ ಗುತ್ತಿಗೆ ಮುಗಿದು ಹೋಗಿದೆಯಂತೆ ಅದಕ್ಕೆ ಮನುಷತ್ವವನ್ನೂ ತೋರದೇ ಅವರನ್ನು ಇಲ್ಲೇ ಬಿಟ್ಟು ಹೋಗಿದ್ದಾನೆ ಎಂದು ತಿಳಿಸಿದ್ದಾರೆ. ನಾವು ವೃದ್ಧನ ಮಕ್ಕಳಿಗೆ, ಕೆಲಸದಾತನಿಗೆ ಹಲವು ಬಾರಿ ಕರೆ ಮಾಡಿದರೂ ಯಾರೂ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.
ಪೊಲೀಸರು ಕೂಡ ಹಲವು ಬಾರಿ ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲ್ಲ. ನಂತರ ವೃದ್ಧನನ್ನು ಸಮಾಧಾನ ಪಡಿಸಿ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಗೆ ಕರೆತಂದಾಗ ಅಲ್ಲಿ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದರು. ಟಪಾಲ್ ಕರ್ತವ್ಯಕ್ಕೆ ಬೆಳಗಾವಿಗೆ ಹೋಗುವ ಸಿಬ್ಬಂದಿಗಳು 2-3 ದಿನಗಳಿಗೊಮ್ಮೆ ಆಸ್ಪತ್ರೆಗೆ ಹೋಗಿ ವೃದ್ಧನ ಆರೋಗ್ಯ ವಿಚಾರಿಸಿಕೊಂಡು ಬರುತ್ತಿದ್ದರು. ದಿನೇ ದಿನೇ ಅವರ ಆರೋಗ್ಯ ಕ್ಷೀಣಿಸುತ್ತಿತ್ತು. ಇದೀಗ ವೃದ್ಧ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ. ಪೊಲೀಸರು ಕೊನೇ ಬಾರಿಗೆ ವೃದ್ಧನ ಮಗನನ್ನು ಸಂಪರ್ಕಿಸಲು ಯತ್ನಿಸಿದ್ದಾರೆ. ಆದರೆ ಫೋನ್ ಕರೆಸ್ವೀಕರಿಸಿಲ್ಲ. ಕೊನೆಗೆ ಅವರ ಮಗಳನ್ನು ಸಂಪರ್ಕಿಸಿದಾಗ ವಾಟ್ಸಪ್ ಕರೆ ಸ್ವೀಕರಿಸಿದ್ದ ಮಗಳು, ನಮ್ಮ ತಂದೆ ಆಗ ಇದ್ದರು ಇವಾಗ ಇಲ್ಲ, ಅವರಿಗೂ ನಮಗೂ ಯಾವುದೇ ಸಂಬಂಧವಿಲ್ಲ… ನಮ್ಮ ಕುಟುಂಬದ ವಿಷಯ ನಿಮಗೆ ಅರ್ಥ ಆಗಲ್ಲ. ಇಷ್ಟಕ್ಕೂ ನಿಮಗೆ ನಾವು ಅವರಿಗೆ ಚಿಕಿತ್ಸೆ ಕೊಡಿಸಿ ಎಂದು ಹೇಳಿಲ್ಲ… ನಾವು ನೆಮ್ಮದಿಯಿಂದ ಇದ್ದೀವಿ ಸುಮ್ಮನೆ ನಮಗೆ ತೊಂದರೆ ಕೋಡಬೇಡಿ. ಮುಂದಿನ ಕಾರ್ಯ ಮಾಡೋಕೆ ಆದರೆ ಮಾಡಿ ಇಲ್ಲ ಹೆಣ ಬಿಸಾಕಿ ಎಂದು ಹೇಳಿದ್ದಾಳೆ. ಮಾತುಗಳನ್ನು ಕೇಳಿ ಶಾಕ್ ಆದ ಚಿಕ್ಕೋಡಿ ಪೊಲೀಸ್ ಸಿಬ್ಬಂದಿ ಕಣ್ಣೀರಾಗಿದ್ದಾರೆ. ಅಲ್ಲದೇ ವೃದ್ಧನ ಶವವನ್ನು ನಾಗರಮುನ್ನೋಳಿ ಗ್ರಾಮಕ್ಕೆ ತಂದು ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಅಧ್ಯಕ್ಷರು ಹಾಗೂ ಸದಸ್ಯರುಗಳ ಸಹಾಯದಿಂದ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.
ಈ ಘಟನೆ ಕಂಡು ಚಿಕ್ಕೋಡಿ ಪಿಎಸ್ ಐ ಬಸಗೌಡ, ಮಕ್ಕಳಿಗೆ ನಾವು ನೈತಿಕ ಹಾಗೂ ಮೌಲ್ಯಾಧಾರಿತ ಶಿಕ್ಷಣ ನೀಡುವುದನ್ನು ಮರೆತು ಅನಾಗರಿಕರನ್ನಾಗಿ ಬೆಳೆಸುತ್ತಿದ್ದೇವೆ. ಮಕ್ಕಳಿಗೆ ಮೊದಲು ಶಿಕ್ಷಣ ನೀಡುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಕಲಿಸಬೇಕಿದೆ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.