ಬೆಳಗಾವಿ: ಅಪರಾಧಕೃತ್ಯಗಳಲ್ಲಿ ಭಾಗಿಯಾಗಿ ಸಾರ್ವಜನಿಕರ ನೆಮ್ಮದಿಗೆ ತೊಂದರೆ ಕೊಡುತ್ತಿದ್ದ ಐವರು ಕುಖ್ಯಾತ ರೌಡಿಗಳನ್ನು ಬೆಳಗಾವಿ ಜಿಲ್ಲೆಯಿಂದ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.
ಕೊಲೆ, ಕೊಲೆಗೆ ಯತ್ನ, ದರೋಡೆ, ಗಾಂಜಾ ಮಾರಾಟದಂತ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಐವರು ಆರೋಪಿಗಳನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಬ್ಜಿಲ್ಲೆಯಿಂದ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.
ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ ಪಿರಾಜಿ ಯಲ್ಲಪ್ಪ ಯಸೂಚೆ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 4 ಎನ್ಡಿಪಿಎಸ್ ಪ್ರಕರಣಗಳಿವೆ. ಅದೇ ರೀತಿ ಟಿಳಕವಾಡಿ ನಿವಾಸಿಗಳಾದ ಯಶ್ ಗಣೇಶ ಗವಳಿ (ದಾವಲೆ), ಆದಿತ್ಯ ಗಣೇಶ ಗವಳಿ (ದಾವಲೆ) ವಿರುದ್ಧ ಟಿಳಕವಾಡಿ ಠಾಣೆಯಲ್ಲಿ 2 ಹಲ್ಲೆ ಮತ್ತು ಕೊಲೆ ಪ್ರಕರಣಗಳಿವೆ. ಬೆಳಗಾವಿ ಪಾರ್ವತಿ ನಗರದ ಸಂತೋಷ ಗೋವಿಂದ ದಿವಟಗಿ ವಿರುದ್ಧ ಉದ್ಯಮಬಾಗ ಠಾಣೆಯಲ್ಲಿ 5 ಹಲ್ಲೆ ಮತ್ತು ಕೊಲೆ ಪ್ರಕರಣಗಳಿವೆ. ಬೆಳಗಾವಿ ತಾಲೂಕಿನ ಮಚ್ಛೆ ಪಟ್ಟಣದ ರಫೀಕ್ ಮಹ್ಮದ್ ಇಸ್ತಿಯಾಕ್ ಶೇಖ್ ವಿರುದ್ಧ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ 3 ದರೋಡೆ ಯತ್ನ, ಹಲ್ಲೆ ಮತ್ತು ಪೋಕ್ಸೊ ಪ್ರಕರಣಗಳು ದಾಖಲಾಗಿವೆ.
ಈ ಐವರು ರೂಢಿಗತ ಆರೋಪಿಗಳಾಗಿದ್ದು, ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 55 ಹಾಗೂ ಕಲಂ 56ರ ಅಡಿಯಲ್ಲಿ ಎಪ್ರಿಲ್ 10ರಿಂದ ಅಕ್ಟೋಬರ್ 9ರ ವರೆಗೆ ಆರು ತಿಂಗಳು ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ.
ಬೆಳಗಾವಿ ನಗರದಲ್ಲಿ ಗಾಂಜಾ ಮಾದಕ ವಸ್ತುವಿನ ಮಾರಾಟವನ್ನು ಸಂಪೂರ್ಣವಾಗಿ ನಿಯಂತ್ರಿಸುವ ನಿಟ್ಟಿನಲ್ಲಿ, ಗಾಂಜಾ ಮಾರಾಟಗಾರರು, ಕೊಲೆ ಮತ್ತು ಕೊಲೆಗೆ ಪ್ರಯತ್ನದಂತಹ ಘೋರ ಅಪರಾಧ ಪ್ರಕರಣಗಳಲ್ಲಿ ಭಾಗಿ ಆಗುವವರು ಹಾಗೂ ನಗರದಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಸಾರ್ವಜನಿಕರಲ್ಲಿ ಭಯಭೀತಿ ಹುಟ್ಟಿಸುತ್ತಿದ್ದ ಆರೋಪಿಗಳ ವಿರುದ್ಧ ಈಗಾಗಲೇ ಕಠಿಣ ಕಾನೂನು ಕ್ರಮಗಳನ್ನು ಕೈಕೊಳ್ಳುತ್ತಿದ್ದೇವೆ. ಅದರ ಭಾಗವಾಗಿ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು ಹಾಗೂ ಸಾರ್ವಜನಿಕ ನೆಮ್ಮದಿಯನ್ನು ಕಾಪಾಡುವುದಕ್ಕಾಗಿ ಈ ಐವರನ್ನು ಗಡಿಪಾರು ಮಾಡಿದ್ದೇವೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

