HomeKarnatakaಬೆಳಗಾವಿ ಸುವರ್ಣಸೌಧದಲ್ಲಿ ಮಾದರಿ ಚಳಿಗಾಲದ ಅಧಿವೇಶನ: ಖಾದರ್

ಬೆಳಗಾವಿ ಸುವರ್ಣಸೌಧದಲ್ಲಿ ಮಾದರಿ ಚಳಿಗಾಲದ ಅಧಿವೇಶನ: ಖಾದರ್

ಬೆಳಗಾವಿ: ಪ್ರತಿವರ್ಷದಂತೆ ವಿಧಾನಮಂಡಲ ಚಳಿಗಾಲ ಅಧಿವೇಶನದಲ್ಲಿ ಭಾಗವಹಿಸುವ ಸಚಿವರು, ಶಾಸಕರು, ಅಧಿಕಾರಿಗಳು ಸೇರಿದಂತೆ ಎಲ್ಲರಿಗೂ ಸೂಕ್ತವಾದ ವಸತಿ, ಊಟೋಪಹಾರ ಹಾಗೂ ಸಾರಿಗೆ ಸೌಕರ್ಯಗಳನ್ನು ಒದಗಿಸಬೇಕು. ಇದಲ್ಲದೇ ವಿಧಾನಮಂಡಲದ ಕಲಾಪಗಳನ್ನು ಸುಗಮವಾಗಿ ನಡೆಸಲು ಅಗತ್ಯವಿರುವ ಮೂಲಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕು ಎಂದು ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ವಿಧಾನಮಂಡಳ ಚಳಿಗಾಲ ಅಧಿವೇಶನ ಹಿನ್ನೆಲೆಯಲ್ಲಿ ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಮತ್ತು ವಿವಿಧ ಸಮಿತಿಗಳ ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಧಿವೇಶನ ಸಂದರ್ಭದಲ್ಲಿ ಯಾವುದೇ ರೀತಿಯ ಅವ್ಯವಸ್ಥೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಏನೇ ಸಮಸ್ಯೆಗಳಿದ್ದರೆ ಅಥವಾ ಹೆಚ್ಚಿನ ಅನುಕೂಲತೆ ಬೇಕಾದರೆ ತಮ್ಮ ಅಥವಾ ಹಿರಿಯ ಅಧಿಕಾರಿಗಳ  ಗಮನಕ್ಕೆ ತರಬೇಕು. ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಮಿತಿಗಳು ತಮಗೆ ವಹಿಸಲಾಗಿರುವ ಜವಾಬ್ದಾರಿಗಳನ್ನು ನಿಭಾಯಿಸಬೇಕು. ಸಚಿವರು, ಶಾಸಕರು, ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು, ಗಣ್ಯರು ಸೇರಿದಂತೆ ಸಾವಿರಾರು ಜನರು ಆಗಮಿಸುತ್ತಾರೆ. ಆದ್ದರಿಂದ ಉತ್ತಮ ಹಾಗೂ ಗುಣಮಟ್ಟದ ಆಹಾರ, ವಸತಿ, ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ತಿಳಿಸಿದ್ದಾರೆ.

ಮುದ್ರಣ, ಲೇಖನ ಸಾಮಗ್ರಿಗಳನ್ನು ಅಗತ್ಯತೆ ಆಧರಿಸಿ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿಯೇ ಲಭ್ಯವಾಗಿಟ್ಟುಕೊಳ್ಳಬೇಕು. ಸುವರ್ಣ ವಿಧಾನಸೌಧ, ಸಚಿವರು, ಶಾಸಕರು, ಅಧಿಕಾರಿಗಳು, ಸಿಬ್ಬಂದಿ ತಂಗುವ ಹೋಟೆಲ್ ಗಳ ಬಳಿ ತುರ್ತು ವೈದ್ಯಕೀಯ ಸೌಲಭ್ಯ ಒದಗಿಸಲು ತಂಡಗಳನ್ನು ನಿಯೋಜಿಸಬೇಕು ಎಂದರು.

ಹಿನ್ನೆಲೆಯಲ್ಲಿ ಸಂಪೂರ್ಣ ವಿಧಾನಸೌಧ ಕಾಣಿಸುವಂತಹ ಸೆಲ್ಫಿ ಸ್ಪಾಟ್ ನಿಗದಿಪಡಿಸಬೇಕು. ಅಧಿವೇಶನ ಕಲಾಪ ವೀಕ್ಷಣೆಗೆ ಆಗಮಿಸುವ ಜನರಿಗೆ ಇದೊಂದು ಸ್ಮರಣೀಯ ಅವಕಾಶವಾಗಬೇಕು ಎಂದು ಯು.ಟಿ.ಖಾದರ್ ಹೇಳಿದರು.

ಸುವರ್ಣ ಸೌಧ ಮುಂಭಾಗ ಸುಂದರ ಉದ್ಯಾನ ನಿರ್ಮಾಣಕ್ಕೆ ಸಭಾಪತಿ ಹೊರಟ್ಟಿ ಸೂಚನೆ:

ಅಧಿವೇಶನ ಸಂದರ್ಭದಲ್ಲಿ ವಿಧಾನಸೌಧದ ಹೊರಗಡೆ ಆವರಣದಲ್ಲಿ ಚಾಲಕರು, ಇತರೆ ಸಿಬ್ಬಂದಿಗೆ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಬೇಕು. ಸಾಧ್ಯವಾದರೆ ಕೂಪನ್‌ ನೀಡಬಹುದು ಎಂದು ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.

ಕಲಾಪ ವೀಕ್ಷಣೆಗೆ ಆಗಮಿಸುವ ಶಾಲಾ ಮಕ್ಕಳ ಬಸ್ ಗಳಿಗೆ ವಿಧಾನಸೌಧದ ಒಳಗಡೆಯ ಮುಖ್ಯದ್ವಾರದವರೆಗೆ ಅವಕಾಶ ಕಲ್ಪಿಸಬೇಕು ಎಂದು ಪೊಲೀಸ್ ಇಲಾಖೆಯ ಆಯುಕ್ತರಿಗೆ ತಿಳಿಸಿದರು.

ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಸುಂದರ ಉದ್ಯಾನ ನಿರ್ಮಿಸುವುದಕ್ಕೆ ಸಂಬಂಧಿಸಿದಂತೆ ತೋಟಗಾರಿಕೆ ಮತ್ತು ಲೋಕೋಪಯೋಗಿ ಇಲಾಖೆಯವರು ಪರಿಶೀಲನೆ ನಡೆಸಿ ಸೂಕ್ತ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸೂಚನೆ ನೀಡಿದರು. ಈಗಾಗಲೇ ಅನುಮೋದನೆಯಾಗಿರುವ ಉದ್ಯಾನ ಕಾಮಗಾರಿಯನ್ನು ತಕ್ಷಣವೇ ಆರಂಭಿಸಬೇಕು. ಈ ಬಗ್ಗೆ ಒಂದು ವಾರದೊಳಗೆ ವರದಿ ನೀಡಬೇಕು ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಪೊಲೀಸ್ ಆಯುಕ್ತ ಎಸ್.ಎನ್. ಸಿದ್ದರಾಮಪ್ಪ ಮಾತನಾಡಿದರು.

ವಿಧಾನಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮೀ, ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ, ಜಿಲ್ಲಾ ಪಙಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ ಮತ್ತಿತರರು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular