ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣಾ ಅಖಾಡ ಕಾವೇರಿದೆ. ಕೃಷಿ ಪತ್ತಿನ ಸಹಕಾರಿ ಸಂಘ ಸದಸ್ಯರ ಕಾವಲು ಕಾಯಲು ಪುಢಾರಿಗಳು ರಾಜಾರೋಷವಾಗಿ ಲಾಂಗು, ಮಚ್ಚು ಹಿಡಿದು ಹಾಡಹಗಲೇ ಓಡಾಡುತ್ತಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ವಿಶ್ವರಾಜ್ ಶುಗರ್ಸ್ ಕಟ್ಟಡದ ಸುತ್ತ ಕಾವಲು ಕಾಯುತ್ತಿರುವ ಪುಢಾರಿಗಳು ಲಾಂಗು, ಮಚ್ಚು ಹಿಡಿದು ಓಡಾಡುತ್ತಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಹಿನ್ನೆಲೆಯಲ್ಲಿ ಕತ್ತಿ ಹಾಗೂ ಜಾರಕಿಹೊಳಿ ಕುಟುಂಬಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಸದಸ್ಯರನ್ನು ವಿರೋಧಿ ಬಣ ಕಿಡ್ನ್ಯಾಪ್ ಮಾಡಬಾರದು ಎಂಬ ಕಾರಣಕ್ಕೆ ಲಾಂಗು, ಮಚ್ಚು ಹಿಡಿದು ಕಾವಲು ಕಾಯುತ್ತಿದ್ದಾರೆ ಎನ್ನಲಾಗುತ್ತಿದೆ. ಇಂತಹ ಪುಢಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.