ಬೆಳಗಾವಿ: ಟನ್ ಕಬ್ಬಿಗೆ 3500 ರೂಪಾಯಿ ನಿಗದಿ ಮಾಡುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆ ಬೆಳಗಾವಿಯ ಹತ್ತರಗಿಯಲ್ಲಿ ಹಿಂಸಾಚಾರಕ್ಕೆ ತಿರುಗಿದೆ. ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಈ ವೇಖೆ ನೂಕಾಟ-ತಳ್ಳಾಟ ನಡೆದು ಡಿವೈಎಸ್ ಪಿ ಕೈ ಮುರಿದಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಹತ್ತರಗಿ ಕ್ರಾಸ್ ನಲ್ಲಿ ಕಬ್ಬು ಬೆಳೆಗಾರರು ಪ್ರತಿಭಟನೆ ತೀವ್ರಗೊಳಿಸಿದ್ದರು. ಈ ವೇಳೆ ಪುಣೆ-ಬೆಂಗಳೂರು ರಾಷ್ಟ್ರಿಯ ಹೆದ್ದಾರಿ ಬಂದ್ ಮಾಡಿ ಹೋರಾಟ ನಡೆಸಿದ್ದರು. ಇದರಿಂದಾಗಿ ಬಸ್ ಗಳು ಹಾಗೂ ವಾಹನ ಸಂಚಾರ ಏಕಾಏಕಿ ಸ್ಥಗಿತಗೊಂಡಿದ್ದು, ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಸಂಭವಿಸಿದೆ. ಇದರಿಂದಾಗಿ ಪೊಲೀಸರು ಪ್ರತಿಭಟನಾ ನಿರತ ರೈತರಿಗೆ ಹೆದ್ದಾರಿ ಬಂದ್ ಮಾಡದಂತೆ ಮನವೊಲಿಸಲು ಯತ್ನಿಸಿದ್ದಾರೆ. ಆದರೆ ರೈತರು ರಸ್ತೆ ತಡೆ ನಿಲ್ಲಿಸಿಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಟ್ರ್ಯಾಕ್ಟರ್ ಗಳನ್ನು ಅಡ್ಡ ಇಟ್ಟು ಪ್ರತಿಭಟನೆ ಮುಂದುವರೆಸಿದ್ದರು. ಈ ವೇಳೆ ಪೊಲೀಸರು ರೈತ ಮುಖಂಡರನ್ನು ನೂರಾರು ರೈತರನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸರು ರೈತರನ್ನು ವಶಕ್ಕೆ ಪಡೆಯುತ್ತಿದ್ದಂತೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸರು, ರೈತರು, ಸಿಕ್ಕ ಸಿಕ್ಕ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸಪಟ್ಟಿದ್ದಾರೆ. ಈ ವೇಳೆ ನೂಕಾಟ-ತಳ್ಳಾಟ ನಡೆದಿದೆ. ಘಟನೆಯಲ್ಲಿ ಡಿವೈಎಸ್ ಪಿ ಓರ್ವರ ಕೈ ಮುರಿದಿದೆ. ಕಲ್ಲು ತೂರಾಟದಿಂದಾಗಿ ಪೊಲೀಸರು, ಹೋರಾಟಗಾರರು ಕೂಡ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
