ಸಿಹಿ ತಿಂಡಿ ತಿನ್ನುವ ಮುನ್ನ ಈ ಸುದ್ದಿ ಒಮ್ಮೆ ಓದಿ..! ಛತ್ತೀಸ್‌ಗಢದ ಕೊರ್ಬಾ ನಗರದಲ್ಲಿರುವ ಪ್ರಸಿದ್ಧ ಬೇಕರಿಯಲ್ಲಿ ಸಿಹಿ ತಿಂಡಿಗಳು ಹಾಗೂ ಖಾದ್ಯ ತಯಾರಿಸಲು ಬಳಸುವ ದೊಡ್ಡ ಪಾತ್ರೆಗಳನ್ನು ಶೌಚಾಲಯದ ನೆಲದ ಮೇಲೆ ಇಟ್ಟು ತೊಳೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಆಹಾರ ಸುರಕ್ಷತಾ ಇಲಾಖೆ ಕ್ರಮಕ್ಕೆ ಮುಂದಾಗಿದೆ.
ಹಬ್ಬಗಳ ಸೀಸನ್ ಸಮೀಪಿಸುತ್ತಿರುವ ಬೆನ್ನಲ್ಲೇ ಆಹಾರ ಸುರಕ್ಷತೆ ಕುರಿತು ಆತಂಕ ಮೂಡಿಸುವ ಘಟನೆ ಛತ್ತೀಸ್‌ಗಢದ ಕೊರ್ಬಾದಲ್ಲಿ ನಡೆದಿದೆ. ನಗರದ ನಿಹಾರಿಕಾ ಪ್ರದೇಶದಲ್ಲಿರುವ ಪ್ರಸಿದ್ಧ ‘ನ್ಯೂ ದೆಹಲಿ ಸ್ವೀಟ್ಸ್’ ಅಂಗಡಿಯಲ್ಲಿ ಆಹಾರ ತಯಾರಿಕೆಗೆ ಬಳಸುವ ದೊಡ್ಡ ಪಾತ್ರೆಗಳನ್ನು ಶೌಚಾಲಯದ ನೆಲದ ಮೇಲೆ ಇಟ್ಟು ಸಾಬೂನಿನಿಂದ ತೊಳೆಯುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ಅಂಗಡಿಗೆ ಬಂದಿದ್ದ ಗ್ರಾಹಕರೊಬ್ಬರು ಈ ದೃಶ್ಯವನ್ನು ಗಮನಿಸಿ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾರೆ. ಅಲ್ಲಿದ್ದ ಸಿಬ್ಬಂದಿಯನ್ನು ಈ ಬಗ್ಗೆ ಪ್ರಶ್ನಿಸಿದಾಗ, ಅಂಗಡಿಯಲ್ಲಿ ಏಕಾಏಕಿ ತಾಂತ್ರಿಕ ಸಮಸ್ಯೆ ಉಂಟಾಗಿದ್ದರಿಂದ ಅನಿವಾರ್ಯವಾಗಿ ಶೌಚಾಲಯದಲ್ಲಿ ಪಾತ್ರೆಗಳನ್ನು ತೊಳೆಯುತ್ತಿರುವುದಾಗಿ ಸಿಬ್ಬಂದಿ ತಿಳಿಸಿದ್ದಾರೆ.
ಆದರೆ ಸಿಬ್ಬಂದಿಯ ಈ ವಿವರಣೆಗೆ ಗ್ರಾಹಕರು ಸಮಾಧಾನಗೊಂಡಿಲ್ಲ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಹಬ್ಬದ ವೇಳೆಯೇ ಶಾಕಿಂಗ್ ಘಟನೆ
ಹಬ್ಬಗಳ ಸಂದರ್ಭದಲ್ಲಿ ಸಿಹಿ ತಿಂಡಿಗಳ ಬೇಡಿಕೆ ಹೆಚ್ಚಾಗುವ ಸಮಯದಲ್ಲೇ ಇಂತಹ ಅಸ್ವಚ್ಛ ವಾತಾವರಣದಲ್ಲಿ ಆಹಾರ ತಯಾರಿಕೆಗೆ ಬಳಸುವ ಪಾತ್ರೆಗಳನ್ನು ತೊಳೆಯುತ್ತಿರುವ ದೃಶ್ಯ ಬೆಳಕಿಗೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.
ಘಟನೆ ಕುರಿತು ಆಹಾರ ಸುರಕ್ಷತಾ ಇಲಾಖೆ ತಕ್ಷಣ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಅಧಿಕಾರಿಗಳಿಂದ ಕಠಿಣ ಕ್ರಮದ ಎಚ್ಚರಿಕೆ
ವೈರಲ್ ವಿಡಿಯೋ ಕುರಿತು ಪ್ರತಿಕ್ರಿಯಿಸಿರುವ ಆಹಾರ ಸುರಕ್ಷತಾ ಅಧಿಕಾರಿ ವಿಕಾಸ್ ಭಗತ್, ವಿಡಿಯೋ ಆಧರಿಸಿ ಅಂಗಡಿ ಮಾಲೀಕರಿಗೆ ನೋಟಿಸ್ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಶೌಚಾಲಯದಂತಹ ಸ್ಥಳಗಳಲ್ಲಿ ಆಹಾರ ತಯಾರಿಕೆಗೆ ಬಳಸುವ ಪಾತ್ರೆಗಳನ್ನು ತೊಳೆಯುವುದು ಆಹಾರ ಸುರಕ್ಷತಾ ನಿಯಮಗಳಿಗೆ ವಿರುದ್ಧವಾಗಿದೆ. ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಿದ್ದು, ಆರೋಪಗಳು ನಿಜವೆಂದು ದೃಢಪಟ್ಟರೆ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಮತ್ತೊಂದು ರೆಸ್ಟೋರೆಂಟ್‌ನಲ್ಲೂ ಇದೇ ರೀತಿಯ ಘಟನೆ
ಇದೇ ರೀತಿಯ ಮತ್ತೊಂದು ಘಟನೆ ಛತ್ತೀಸ್‌ಗಢದ ಶಕ್ತಿ ಜಿಲ್ಲೆಯ ಹರೇಡಿ ಪ್ರದೇಶದಲ್ಲಿರುವ ‘ಪಾಪಾ ಢಾಬಾ’ ರೆಸ್ಟೋರೆಂಟ್‌ನಲ್ಲೂ ವರದಿಯಾಗಿದೆ.ಇಲ್ಲಿಯೂ ಪುರುಷರ ಶೌಚಾಲಯದಲ್ಲಿ ಪಾತ್ರೆಗಳನ್ನು ತೊಳೆಯುತ್ತಿರುವ ವಿಡಿಯೋ ವೈರಲ್ ಆಗಿತ್ತು. ಈ ಕುರಿತು ಆಹಾರ ಮತ್ತು ಔಷಧ ಆಡಳಿತ ಇಲಾಖೆ ಸ್ಥಳಕ್ಕೆ ತೆರಳಿ ತನಿಖೆ ನಡೆಸಿದ್ದು, ವಿಡಿಯೋದಲ್ಲಿನ ಘಟನೆ ನಿಜವೆಂದು ದೃಢಪಟ್ಟಿದೆ.ಇದರ ಬೆನ್ನಲ್ಲೇ ಅಧಿಕಾರಿಗಳು ರೆಸ್ಟೋರೆಂಟ್‌ನ ಆಹಾರ ಸುರಕ್ಷತಾ ಪರವಾನಗಿಯನ್ನು ಅಮಾನತುಗೊಳಿಸಿದ್ದಾರೆ.
ಹೋಟೆಲ್‌ಗಳ ತಪಾಸಣೆಗೆ ಒತ್ತಾಯ
ಒಂದರ ಹಿಂದೆ ಒಂದರಂತೆ ಇಂತಹ ಘಟನೆಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ, ನಗರದ ಎಲ್ಲಾ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಸ್ವೀಟ್ ಶಾಪ್‌ಗಳಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ತೀವ್ರ ತಪಾಸಣೆ ನಡೆಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಆಹಾರ ತಯಾರಿಕೆಯಲ್ಲಿ ಸ್ವಚ್ಛತೆ ಅತ್ಯಂತ ಪ್ರಮುಖವಾಗಿದ್ದು, ನಿರ್ಲಕ್ಷ್ಯದಿಂದ ಗ್ರಾಹಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ವೈರಲ್ ವಿಡಿಯೋಗಳ ಆಧಾರದ ಮೇಲೆ ಮಾತ್ರವಲ್ಲದೆ, ಆಹಾರ ಮಳಿಗೆಗಳಲ್ಲಿ ನಿಯಮಿತ ತಪಾಸಣೆ ನಡೆಸಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.

