ಬೀಡ್: ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪಾರ್ಲಿಯ ದಹಿಫಳೆ ಕುಟುಂಬದಲ್ಲಿ ಸುಮಾರು 200 ವರ್ಷಗಳ ಬಳಿಕ ಹೆಣ್ಣುಮಗುವೊಂದು ಜನಿಸಿದೆ. ಕುಟುಂಬಕ್ಕೆ ಬಹಳ ವರ್ಷಗಳ ಬಳಿಕ ಹೆಣ್ಣುಮಗು ಆಗಮಿಸಿದ್ದರಿಂದ ಸಂಬಂಧಿಕರು ಹಾಗೂ ಕುಟುಂಬಸ್ಥರು ಸಂಭ್ರಮದಿಂದ ಸ್ವಾಗತಿಸಿದ್ದಾರೆ.
ಶನಿವಾರ ನಡೆದ ಈ ವಿಶೇಷ ಸಂಭ್ರಮ ಪಾರ್ಲಿಯಲ್ಲಿ ಸಾಕಷ್ಟು ಗಮನ ಸೆಳೆಯಿತು. ಆಸ್ಪತ್ರೆಯಿಂದ ತಾಯಿ ಮತ್ತು ಮಗುವನ್ನು ಮನೆಗೆ ಕರೆತರುವಾಗ ವಿಶೇಷ ಮೆರವಣಿಗೆ ಆಯೋಜಿಸಲಾಗಿತ್ತು. ಹೂವುಗಳಿಂದ ಅಲಂಕರಿಸಿದ ರಥದಲ್ಲಿ ನವಜಾತ ಶಿಶು ಮತ್ತು ತಾಯಿಯನ್ನು ಮನೆಗೆ ಕರೆತರಲಾಯಿತು.
https://x.com/fpjindia/status/2095165353148178776
ಭಗವಾನ್ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿರುವ ಲಿಂಬಾಜಿ ದಹಿಫಳೆ ಅವರ ಕುಟುಂಬದಲ್ಲಿ ಈ ಸಂಭ್ರಮ ಮನೆ ಮಾಡಿತ್ತು. ಅವರ ಕಿರಿಯ ಸೊಸೆ ಕಲ್ಪನಾ ಅವರು ಗುರುವಾರ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಕುಟುಂಬದಲ್ಲಿ ಸುಮಾರು ಎರಡು ಶತಮಾನಗಳಿಂದ ಹೆಣ್ಣುಮಗು ಜನಿಸಿರಲಿಲ್ಲ ಎನ್ನಲಾಗಿದೆ.
ಶನಿವಾರ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ತಾಯಿ ಮತ್ತು ಮಗುವನ್ನು ಪಾರ್ಲಿಯ ಇಂದಿರಾನಗರದಲ್ಲಿರುವ ಮನೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ಸಂಬಂಧಿಕರು, ಸ್ನೇಹಿತರು ಹಾಗೂ ಹಿತೈಷಿಗಳು ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು.
ಮೆರವಣಿಗೆಯಲ್ಲಿ ಡೋಲು-ತಮಟೆ ಮೊಳಗಿದ್ದು, ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಮನೆಗೆ ಆಗಮಿಸಿದ ಹೊಸ ಸದಸ್ಯೆಯನ್ನು ಕುಟುಂಬಸ್ಥರು ಆರತಿ ಬೆಳಗಿ ಆತ್ಮೀಯವಾಗಿ ಬರಮಾಡಿಕೊಂಡರು. ಮನೆ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಹೂವು ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಈ ಸಂದರ್ಭದಲ್ಲಿ ಜಿಲೇಬಿ ಸೇರಿದಂತೆ ಸಿಹಿತಿಂಡಿಗಳನ್ನು ಹಂಚಲಾಯಿತು.
ಹೆಣ್ಣುಮಗುವಿನ ಜನನವನ್ನು ಗಂಡು ಮಗುವಿನಷ್ಟೇ ಸಂತೋಷದಿಂದ ಸ್ವಾಗತಿಸಬೇಕು ಎಂಬ ಸಂದೇಶವನ್ನು ಈ ಕುಟುಂಬದ ಸಂಭ್ರಮ ಸಾರಿದೆ. ಸುಮಾರು 200 ವರ್ಷಗಳ ಬಳಿಕ ಕುಟುಂಬಕ್ಕೆ ಹೆಣ್ಣುಮಗು ಆಗಮಿಸಿರುವುದು ಸ್ಥಳೀಯರಲ್ಲೂ ವಿಶೇಷ ಕುತೂಹಲ ಮೂಡಿಸಿದೆ.

