ಏಷ್ಯನ್ ಗೇಮ್ಸ್ ಪಂದ್ಯಾವಳಿಗೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಬದಲಾವಣೆ ಮಾಡಲಾಗಿದ್ದು, ಗಾಯಾಳು ಸ್ಪಿನ್ನರ್ ವರುಣ್ ಚಕ್ರವರ್ತಿ ಅವರ ಬದಲಿಗೆ ದೆಹಲಿ ಕ್ಯಾಪಿಟಲ್ಸ್ ಆಟಗಾರ ವಿಪ್ರಾಜ್ ನಿಗಮ್ ಅವರನ್ನು ಆಯ್ಕೆ ಮಾಡಲಾಗಿದೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯ ಈ ನಿರ್ಧಾರಕ್ಕೆ ಭಾರತ ತಂಡದ ಮಾಜಿ ನಾಯಕ ಹಾಗೂ ಪ್ರಸಿದ್ಧ ಕ್ರಿಕೆಟಿಗ ಕ್ರಿಸ್ ಶ್ರೀಕಾಂತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಫ್ಘಾನಿಸ್ತಾನ ವಿರುದ್ಧದ ಚುಟುಕು ಸರಣಿಯ ಮೊದಲ ಪಂದ್ಯದ ವೇಳೆ ವರುಣ್ ಚಕ್ರವರ್ತಿ ಗಾಯಗೊಂಡಿದ್ದರಿಂದ ಉಳಿದ ಪಂದ್ಯಗಳು ಹಾಗೂ ಮುಂಬರುವ ಏಷ್ಯನ್ ಗೇಮ್ಸ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಆಯ್ಕೆ ಮಂಡಳಿಯು ವಿಪ್ರಾಜ್ ಅವರಿಗೆ ಅವಕಾಶ ನೀಡಿದೆ. 2025ರ ಐಪಿಎಲ್ ಆವೃತ್ತಿಯಲ್ಲಿ ದೆಹಲಿ ಪರ ಉತ್ತಮ ಪ್ರದರ್ಶನ ನೀಡಿದ್ದ ವಿಪ್ರಾಜ್, 142 ರನ್ ಗಳಿಸುವುದರ ಜೊತೆಗೆ 11 ವಿಕೆಟ್ ಪಡೆದಿದ್ದರು. ಆದರೆ 2026ರ ಆವೃತ್ತಿಯಲ್ಲಿ ಕೇವಲ 5 ಪಂದ್ಯಗಳನ್ನಷ್ಟೇ ಆಡಿ ನೀರಸ ಪ್ರದರ್ಶನ ನೀಡಿದ್ದರು.
ಈ ಕುರಿತು ತಮ್ಮ ಯೂಟ್ಯೂಬ್ ವಾಹಿನಿಯಲ್ಲಿ ಮಾತನಾಡಿರುವ ಶ್ರೀಕಾಂತ್, ಯಾವುದೇ ಬಲವಾದ ಆಧಾರವಿಲ್ಲದೆ ವಿಪ್ರಾಜ್ ನಿಗಮ್ ಅವರನ್ನು ತಕ್ಷಣವೇ ತಂಡಕ್ಕೆ ಸೇರಿಸಿಕೊಂಡಿರುವುದನ್ನು ಪ್ರಶ್ನಿಸಿದ್ದಾರೆ. ವರುಣ್ ಅವರಂತಹ ಪ್ರಮುಖ ಸ್ಪಿನ್ನರ್ ಜಾಗಕ್ಕೆ ಈ ರೀತಿ ಆಟಗಾರರನ್ನು ಆಯ್ಕೆ ಮಾಡುವುದು ಸರಿಯಲ್ಲ ಹಾಗೂ ಭಾರತೀಯ ತಂಡದ ಕ್ಯಾಪ್ ಮೌಲ್ಯವನ್ನು ಕಡಿಮೆ ಮಾಡಿದಂತಾಗಿದೆ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ನಿರಂತರವಾಗಿ ಜಯ ತಂದಿಕೊಡುವ ಸಾಮರ್ಥ್ಯ ಹೊಂದಿರುವ ಕೃಣಾಲ್ ಪಾಂಡ್ಯ, ರಜತ್ ಪಟಿದಾರ್ ಮತ್ತು ಭುವನೇಶ್ವರ್ ಕುಮಾರ್ ಅವರಂತಹ ಅನುಭವಿಗಳನ್ನು ಕಡೆಗಣಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೇವಲ ವಯಸ್ಸನ್ನು ಮಾನದಂಡವಾಗಿಟ್ಟುಕೊಂಡು ಪ್ರತಿಭಾವಂತರನ್ನು ಹೊರಗಿಡುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಯುವ ಆಟಗಾರರು ತಮ್ಮ ಅತ್ಯುತ್ತಮ ಪ್ರದರ್ಶನದಿಂದ ಹಿರಿಯರನ್ನು ಹಿಂದಿಕ್ಕಬೇಕೇ ಹೊರತು, ಐಪಿಎಲ್ನಲ್ಲಿಯೂ ಸರಿಯಾದ ಅವಕಾಶ ಸಿಗದವರಿಗೆ ರಾಷ್ಟ್ರೀಯ ತಂಡದಲ್ಲಿ ಜಾಗ ನೀಡುವುದು ಸರಿಯಲ್ಲ ಎಂಬುದು ಅವರ ವಾದವಾಗಿದೆ.
ಮತ್ತೊಂದೆಡೆ, ದೆಹಲಿಯಲ್ಲಿ ನಡೆದ ಆಫ್ಘಾನಿಸ್ತಾನ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ 127 ರನ್ಗಳ ಬೃಹತ್ ಗೆಲುವು ಸಾಧಿಸಿ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದೆ. ಭಾರತ ತಂಡವು ಜಪಾನ್ನ ನಾಗೋಯಾದಲ್ಲಿ ಸೆಪ್ಟೆಂಬರ್ 28 ರಿಂದ ಆರಂಭವಾಗಲಿರುವ ಏಷ್ಯನ್ ಗೇಮ್ಸ್ನ ಕ್ವಾರ್ಟರ್ ಫೈನಲ್ ಹಂತದಲ್ಲಿ ತನ್ನ ಅಭಿಯಾನವನ್ನು ಪ್ರಸಾರ ಮಾಡಲಿದೆ.

