HomeKarnatakaರೈತರಿಗೆ ಬ್ಯಾಂಕ್ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ : ಜಿಲ್ಲಾಧಿಕಾರಿ ಸೂಚನೆ

ರೈತರಿಗೆ ಬ್ಯಾಂಕ್ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ : ಜಿಲ್ಲಾಧಿಕಾರಿ ಸೂಚನೆ

ಧಾರವಾಡ :  ರೈತರ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಸಾಲ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವ ಮೂಲಕ ಪ್ರತಿಯೊಬ್ಬ ಸಣ್ಣ ರೈತನಿಗೂ ಬ್ಯಾಂಕ್ ಸಾಲದ ಪ್ರಯೋಜನ ದೊರೆಯುವಂತೆ ಬ್ಯಾಂಕರ್‍ಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಹೇಳಿದರು.

 ಅವರು ಇಂದು (ಸೆ.2) ಬೆಳಿಗ್ಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಧಾರವಾಡ ಲೀಡ್ ಬ್ಯಾಂಕ್ ವತಿಯಿಂದ ಆಯೋಜಿಸಿದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮಿತಿ (DLRC) ಹಾಗೂ ಜಿಲ್ಲಾ ಸಲಹಾ ಸಮಿತಿ (DCC) ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

 ರೈತರಿಗೆ ಯಾವ ಬ್ಯಾಂಕ್‍ನಲ್ಲಿ ಯಾವ ರೀತಿಯ ಸಾಲ ಸೌಲಭ್ಯ ಲಭ್ಯವಿದೆ, ಸಾಲ ಪಡೆಯಲು ಇರುವ ಅರ್ಹತೆ, ಅಗತ್ಯ ದಾಖಲೆಗಳು, ಸಾಲದ ಮಿತಿ ಹಾಗೂ ವಿವಿಧ ಸರ್ಕಾರಿ ಯೋಜನೆಗಳ ಕುರಿತು ಸಂಪೂರ್ಣ ಮಾಹಿತಿ ನೀಡಬೇಕು. ಈ ಕುರಿತು ಬ್ಯಾಂಕ್‍ಗಳ ನೋಟಿಸ್ ಬೋರ್ಡ್‍ಗಳಲ್ಲಿ ಯೋಜನೆಗಳ ವಿವರಗಳನ್ನು ಸ್ಪಷ್ಟವಾಗಿ ಅಳವಡಿಸಿ, ರೈತರಿಗೆ ಸುಲಭವಾಗಿ ಮಾಹಿತಿ ದೊರೆಯುವಂತೆ ಮಾಡಬೇಕು. ಅಂತಹ ಅರ್ಜಿಗಳನ್ನು 15 ದಿನಗಳೊಳಗಾಗಿ ವಿಲೇವಾರಿ ಮಾಡಬೇಕು ಎಂದು ಬ್ಯಾಂಕಿನ ಅಧಿಕಾರಿಗಳಿಗೆ ಸೂಚಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 ಸಣ್ಣ ಮತ್ತು ಅತಿಸಣ್ಣ ರೈತರು ಸಾಲಕ್ಕಾಗಿ ಬ್ಯಾಂಕ್‍ಗೆ ಬಂದಾಗ ಅವರಿಗೆ ಅಗತ್ಯ  ಮಾರ್ಗದರ್ಶನ ನೀಡಿ, ಸಾಲದ ಅರ್ಜಿ ಸಲ್ಲಿಸುವುದರಿಂದ ಹಿಡಿದು ಸಾಲ ಮಂಜೂರಾಗುವವರೆಗಿನ ಪ್ರಕ್ರಿಯೆಯಲ್ಲಿ ಬ್ಯಾಂಕರ್‍ಗಳು ಸಹಕರಿಸಬೇಕು. ಯಾವುದೇ ಕಾರಣಕ್ಕೂ ರೈತರಿಗೆ ಅನಗತ್ಯ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

 ರೈತರು ಬ್ಯಾಂಕ್‍ಗಳ ಪ್ರಮುಖ ಗ್ರಾಹಕರಾಗಿದ್ದು, ಸಾರ್ವಜನಿಕರ ಸೇವೆಗಾಗಿ ಬ್ಯಾಂಕಿಂಗ್ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆ. ಆದ್ದರಿಂದ ರೈತರೊಂದಿಗೆ ಬ್ಯಾಂಕ್ ಸಿಬ್ಬಂದಿ ಸೌಜನ್ಯಯುತವಾಗಿ ಹಾಗೂ ಗೌರವದಿಂದ ವರ್ತಿಸಬೇಕು. ರೈತರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳಲು ಅನುಕೂಲಕರ ವಾತಾವರಣ ನಿರ್ಮಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಎನ್‍ಪಿಎ ಆಗಿರುವ ಬೆಳೆ ಸಾಲ ಖಾತೆಗಳಿಗೆ ಸಂಬಂಧಿಸಿದ ಉಳಿತಾಯ ಖಾತೆಗಳು ಸ್ಥಗಿತಗೊಂಡಿರುವುದರಿಂದ, ಅಂತಹ ಖಾತೆಗಳಿಗೆ ಸರ್ಕಾರದಿಂದ ಜಮೆಯಾಗುವ ಜೀವನೋಪಾಯ ಸಹಾಯಧನದ ಹಣವನ್ನು ಹಿಂಪಡೆಯಲು ಫಲಾನುಭವಿಗಳು ಬ್ಯಾಂಕ್‍ಗೆ ಆಗಮಿಸಿ ಉಳಿತಾಯ ಖಾತೆಯನ್ನು ಮರುಚಾಲ್ತಿಗೊಳಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಇದರಿಂದ ಫಲಾನುಭವಿಗಳಿಗೆ ಅನಾನುಕೂಲವಾಗುತ್ತಿರುವುದನ್ನು ಸಭೆಯಲ್ಲಿ ಗಮನಕ್ಕೆ ತರಲಾಯಿತು. ಆದ್ದರಿಂದ, ಫಲಾನುಭವಿಗಳು ಯಾವುದೇ ತೊಂದರೆಯಿಲ್ಲದೆ ಸರ್ಕಾರದಿಂದ ಜಮೆಯಾಗುವ ಜೀವನೋಪಾಯ ಸಹಾಯಧನವನ್ನು ಸುಲಭವಾಗಿ ಹಿಂಪಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಲಾಯಿತು.

 ರೈತರಿಗೆ ಕೃಷಿ ಸಾಲ ಮಾತ್ರವಲ್ಲದೆ ಬೆಳೆ ಸಾಲ, ಕೃಷಿ ಯಂತ್ರೋಪಕರಣಗಳ ಸಾಲ, ನೀರಾವರಿ, ಪಶುಸಂಗೋಪನೆ ಸೇರಿದಂತೆ ಬ್ಯಾಂಕ್‍ಗಳ ಮೂಲಕ ಲಭ್ಯವಿರುವ ವಿವಿಧ ಯೋಜನೆಗಳ ಕುರಿತು ಮಾಹಿತಿ ತಲುಪಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ ಅರ್ಹ ರೈತರು ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ಕ್ರಮವಹಿಸಬೇಕು. ಇದೇ ವೇಳೆ ರೈತರಿಗೆ ಮಂಜೂರಾಗುವ ಬೆಳೆ ವಿಮೆ ಮೊತ್ತಕ್ಕೆ ಸಂಬಂಧಿಸಿದಂತೆ ಕೆಲವು ಬ್ಯಾಂಕ್‍ಗಳಲ್ಲಿ ಹಣ ಕಡಿತಗೊಳಿಸಲಾಗುತ್ತಿದೆ ಎಂಬ ದೂರುಗಳಿದ್ದಲ್ಲಿ, ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸಮಗ್ರವಾಗಿ ಪರಿಶೀಲನೆ ನಡೆಸಬೇಕು. ಬೆಳೆ ವಿಮೆ ಹಣ ರೈತರ ಖಾತೆಗೆ ಜಮೆಯಾದ ಸಂದರ್ಭದಲ್ಲಿ ಯಾವುದೇ ನಿಯಮಬಾಹಿರ ಕಡಿತ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಿ, ವಾಸ್ತವಾಂಶವನ್ನು ರೈತರಿಗೆ ಸ್ಪಷ್ಟವಾಗಿ ತಿಳಿಸಬೇಕು ಎಂದು ಸೂಚಿಸಿದರು.

ರೈತರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವುದು ಬ್ಯಾಂಕರ್‍ಗಳ ಜವಾಬ್ದಾರಿಯಾಗಿದೆ. ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಬ್ಯಾಂಕಿಂಗ್ ವ್ಯವಸ್ಥೆಯ ಸಹಕಾರ ಅತ್ಯಂತ ಅಗತ್ಯವಾಗಿದ್ದು, ಅರ್ಹ ರೈತರಿಗೆ ಸಮಯಕ್ಕೆ ಸರಿಯಾಗಿ ಸಾಲ ಸೌಲಭ್ಯ ದೊರೆಯುವಂತೆ ಬ್ಯಾಂಕ್‍ಗಳು ಕಾರ್ಯನಿರ್ವಹಿಸಬೇಕು. ರೈತರಿಗೆ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ತಲುಪಿಸುವಲ್ಲಿ ಬ್ಯಾಂಕರ್‍ಗಳು ಪ್ರಮುಖ ಪಾತ್ರ ವಹಿಸಬೇಕು. ರೈತರು ಬ್ಯಾಂಕ್‍ಗೆ ಬಂದಾಗ ಮಾಹಿತಿ ನೀಡುವುದಷ್ಟೇ ಅಲ್ಲದೆ, ಅವರಿಗೆ ಲಭ್ಯವಿರುವ ಯೋಜನೆಗಳ ಬಗ್ಗೆ ಸ್ವಯಂಪ್ರೇರಿತವಾಗಿ ತಿಳಿಸಿ, ಅಗತ್ಯ ನೆರವು ನೀಡುವ ಮೂಲಕ ರೈತಸ್ನೇಹಿ ಬ್ಯಾಂಕಿಂಗ್ ವ್ಯವಸ್ಥೆ ರೂಪಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

 ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ್ ಅವರು ಮಾತನಾಡಿ, ರೈತರು ಬೆಳೆ ಸಾಲ ಪಡೆಯುವ ಸಂದರ್ಭದಲ್ಲಿ ಬೆಳೆ ವಿಮೆ ಸೇರಿದಂತೆ ಸಂಬಂಧಿಸಿದ ಸೌಲಭ್ಯಗಳ ಕುರಿತು ಬ್ಯಾಂಕ್‍ಗಳಿಂದ ಮಾಹಿತಿ ಪಡೆದುಕೊಳ್ಳಬೇಕು. ಬೆಳೆ ವಿಮೆಯ ಪ್ರೀಮಿಯಂ, ನೋಂದಣಿ ಅವಧಿ, ವಿಮಾ ವ್ಯಾಪ್ತಿಗೆ ಒಳಪಡುವ ಬೆಳೆಗಳು ಹಾಗೂ ಬೆಳೆ ಹಾನಿಯಾದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಬ್ಯಾಂಕ್ ಸಿಬ್ಬಂದಿ ರೈತರಿಗೆ ಸ್ಪಷ್ಟವಾಗಿ ತಿಳಿಸಬೇಕು ಎಂದರು.

 ಬೆಳೆ ಹಾನಿಯಾದ ಸಂದರ್ಭದಲ್ಲಿ ರೈತರಿಗೆ ವಿಮಾ ಪರಿಹಾರ ಪಡೆಯುವ ಪ್ರಕ್ರಿಯೆಯಲ್ಲಿಯೂ ಬ್ಯಾಂಕ್‍ಗಳು ಅಗತ್ಯ ಮಾರ್ಗದರ್ಶನ ನೀಡಬೇಕು. ಯಾವುದೇ ಅರ್ಹ ರೈತರು ಮಾಹಿತಿಯ ಕೊರತೆಯಿಂದ ಬೆಳೆ ವಿಮೆ ಸೌಲಭ್ಯದಿಂದ ವಂಚಿತರಾಗದಂತೆ ಬ್ಯಾಂಕ್‍ಗಳು ಹಾಗೂ ಕೃಷಿ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular