ಬೆಂಗಳೂರು: ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುವುದು ದಿನದಿಂದ ದಿನಕ್ಕೆ ಸವಾಲಾಗಿ ಪರಿಣಮಿಸುತ್ತಿದೆ. ಅದರಲ್ಲೂ ಜನಪ್ರಿಯ ಪ್ರದೇಶಗಳಲ್ಲಿ ಉತ್ತಮ ಮನೆಗಾಗಿ ಹುಡುಕಾಟ ನಡೆಸುವವರಿಗೆ ನಕಲಿ ಅಥವಾ ಹಳೆಯ ಲಿಸ್ಟಿಂಗ್ಗಳು, ಏಕಾಏಕಿ ಹೆಚ್ಚಾಗುವ ಬಾಡಿಗೆ ಹಾಗೂ ಸ್ಪಂದಿಸದ ಬ್ರೋಕರ್ಗಳು ತಲೆನೋವಾಗಿ ಪರಿಣಮಿಸಿವೆ.
ಇದೀಗ ಬೆಂಗಳೂರಿನಲ್ಲಿ 2BHK ಮನೆ ಹುಡುಕುತ್ತಿರುವ ವ್ಯಕ್ತಿಯೊಬ್ಬರು ತಮ್ಮ ಅನುಭವವನ್ನು ರೆಡ್ಡಿಟ್ನಲ್ಲಿ ಹಂಚಿಕೊಂಡಿದ್ದು, ಮನೆ ಹುಡುಕಾಟವೇ ಫುಲ್ಟೈಂ ಕೆಲಸದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
₹30-35 ಸಾವಿರ ಬಜೆಟ್ನಲ್ಲಿ 2BHK ಹುಡುಕಾಟ
ವ್ಯಕ್ತಿ ಮತ್ತು ಅವರ ಸಂಗಾತಿ BTM 2ನೇ ಸ್ಟೇಜ್, BTM 4ನೇ ಸ್ಟೇಜ್ ಅಥವಾ HSR ಲೇಔಟ್ನಲ್ಲಿ ಸೆಮಿ-ಫರ್ನಿಶ್ಡ್ 2BHK ಮನೆ ಹುಡುಕುತ್ತಿದ್ದಾರೆ. ತಿಂಗಳಿಗೆ ಸುಮಾರು ₹30,000ರಿಂದ ₹35,000 ಬಾಡಿಗೆ ಪಾವತಿಸಲು ಸಿದ್ಧರಾಗಿದ್ದು, ಸೆಪ್ಟೆಂಬರ್ ಅಂತ್ಯದೊಳಗೆ ಹೊಸ ಮನೆಗೆ ಶಿಫ್ಟ್ ಆಗುವ ಯೋಜನೆ ಹೊಂದಿದ್ದಾರೆ.
ಆದರೆ ಸೂಕ್ತ ಮನೆ ಹುಡುಕುವ ಸಂದರ್ಭದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.
₹32 ಸಾವಿರದ ಮನೆ ಇದ್ದಕ್ಕಿದ್ದಂತೆ ₹38-40 ಸಾವಿರ!
ರೆಡ್ಡಿಟ್ ಪೋಸ್ಟ್ನಲ್ಲಿ ಅವರು, ಹಲವು ರೆಂಟಲ್ ಪ್ಲಾಟ್ಫಾರ್ಮ್ಗಳಲ್ಲಿ ಲಭ್ಯವಿದೆ ಎಂದು ತೋರಿಸುವ ಮನೆಗಳು ವಾಸ್ತವದಲ್ಲಿ ವಾರಗಳ ಹಿಂದೆಯೇ ಬಾಡಿಗೆಗೆ ಹೋಗಿರುತ್ತವೆ ಎಂದು ಹೇಳಿದ್ದಾರೆ.
ಇನ್ನು ಕೆಲವು ಮನೆಗಳ ವಿಚಾರವಾಗಿ ಫೋನ್ ಮಾಡಿದಾಗ, ಆನ್ಲೈನ್ನಲ್ಲಿ ₹32,000 ಎಂದು ತೋರಿಸಿದ್ದ ಬಾಡಿಗೆಯನ್ನು ಏಕಾಏಕಿ ₹38,000-₹40,000 + ಮೆಂಟೆನೆನ್ಸ್ ಎಂದು ಹೇಳಲಾಗುತ್ತದೆ ಎಂದು ಆರೋಪಿಸಿದ್ದಾರೆ.
ಕೆಲವು ಲಿಸ್ಟಿಂಗ್ಗಳಲ್ಲಿ ‘Owner’ ಎಂದು ನಮೂದಿಸಿದ್ದರೂ, ಸಂಪರ್ಕಿಸಿದ ಬಳಿಕ ಅವು ಬ್ರೋಕರ್ಗಳ ಲಿಸ್ಟಿಂಗ್ಗಳಾಗಿರುವುದು ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೆ, ಮನೆಯ ನಿಖರ ಸ್ಥಳ ಅಥವಾ ಹೆಚ್ಚಿನ ವಿವರಗಳನ್ನು ಕೇಳಿದಾಗ ಕೆಲವು ಬ್ರೋಕರ್ಗಳು ಕರೆ ಸ್ವೀಕರಿಸುವುದಿಲ್ಲ ಅಥವಾ ಪ್ರತಿಕ್ರಿಯಿಸುವುದನ್ನೇ ನಿಲ್ಲಿಸುತ್ತಾರೆ. ಸ್ಥಳಕ್ಕೆ ಹೋದ ನಂತರ ಆನ್ಲೈನ್ನಲ್ಲಿ ತೋರಿಸಿದ ಮನೆಗೆ ಬದಲಾಗಿ ಬೇರೆ ಫ್ಲ್ಯಾಟ್ ತೋರಿಸಿದ ಘಟನೆಗಳೂ ನಡೆದಿವೆ ಎಂದು ಅವರು ತಿಳಿಸಿದ್ದಾರೆ.
ಎಲ್ಲಾ ಸಮಸ್ಯೆಗಳ ನಡುವೆಯೂ ಸೂಕ್ತವಾದ ಮನೆ ಸಿಕ್ಕರೆ ಅದನ್ನು ಅಂತಿಮಗೊಳಿಸುವ ಮೊದಲೇ ಬೇರೆಯವರು ತೆಗೆದುಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಪೋಸ್ಟ್ಗೆ ಹಲವು ರೆಡ್ಡಿಟ್ ಬಳಕೆದಾರರು ಪ್ರತಿಕ್ರಿಯಿಸಿದ್ದು, ಬೆಂಗಳೂರಿನಲ್ಲಿ ಮನೆ ಹುಡುಕುತ್ತಿರುವ ತಮ್ಮ ಅನುಭವವೂ ಇದೇ ರೀತಿಯಾಗಿದೆ ಎಂದು ತಿಳಿಸಿದ್ದಾರೆ. ಕೆಲವರು ಉತ್ತಮ ಮನೆಗಳು ಕೆಲವೇ ಗಂಟೆಗಳಲ್ಲಿ ಬಾಡಿಗೆಗೆ ಹೋಗುತ್ತವೆ ಎಂದು ಹೇಳಿದ್ದಾರೆ.
ಮತ್ತೊಬ್ಬರು ₹32,000 ಎಂದು ತೋರಿಸಿದ ಬಾಡಿಗೆ ಮನೆ ₹40,000ಕ್ಕೆ ಏರಿಕೆಯಾಗುವುದು ಸಾಮಾನ್ಯವಾಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಒಟ್ಟಿನಲ್ಲಿ, ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಕೈಗೆಟುಕುವ ಬಾಡಿಗೆಗೆ ಉತ್ತಮ 2BHK ಹುಡುಕುವುದು ಬಾಡಿಗೆದಾರರಿಗೆ ದೊಡ್ಡ ಸವಾಲಾಗಿ ಪರಿಣಮಿಸುತ್ತಿರುವ ಬಗ್ಗೆ ಈ ರೆಡ್ಡಿಟ್ ಪೋಸ್ಟ್ ಚರ್ಚೆಗೆ ಕಾರಣವಾಗಿದೆ.

