ಬಳ್ಳಾರಿ: ಯೋಧರ ಪ್ಯಾರಚೂಟ್ ತರಬೇತಿ ವೇಳೆ ಅವಘಡ ಸಂಭವಿಸಿದ್ದು, ಯೋಧರೊಬ್ಬರು 50 ಅಡಿ ಎತ್ತರದಿಂದ ಆಯತಪ್ಪಿ ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಬಳ್ಳಾರಿ ಹೊರವಲಯದ ಪಿ.ಡಿ. ಹಳ್ಳಿಯಲ್ಲಿ ಈ ಘತನೆ ನಡೆದಿದೆ. 25 ವರ್ಷದ ಯೋಧ ಚಿನ್ನರಾಜ್ ಗಾಯಗೊಂಡ ದುರ್ದೈವಿ. ಸುಮಾರು 417 ಸೈನಿಕರ ತಂಡ ಪ್ಯಾರಚೂಟ್ ಜಿಗಿತದ ತರಬೇತಿಯಲ್ಲಿ ನಿರತವಾಗಿತ್ತು. ಈ ವೇಳೆ ಚಿನ್ನರಾಜ್ ಅವರು ಪ್ಯಾರಚೂಟ್ ಮೂಲಕ ಜಿಗಿಯುವಾಗ ತಾಂತ್ರಿಕ ತೊಂದರೆಯಿಂದಲೋ ಅಥವಾ ಆಯತಪ್ಪಿದ ಕಾರಣಕ್ಕೋ ಸುಮಾರು 50 ಅಡಿ ಎತ್ತರದಿಂದ ನೇರವಾಗಿ ನೆಲಕ್ಕೆ ಬಿದ್ದಿದ್ದಾರೆ. ಘಟನೆಯ ತೀವ್ರತೆಗೆ ಅವರ ಕಾಲಿನ ಮೂಳೆ ಮುರಿದಿದ್ದು, ತೀವ್ರ ರಕ್ತಸ್ರಾವವಾಗಿದೆ ಎಂದು ತಿಳಿದುಬಂದಿದೆ.
ಗಾಯಗೊಂಡ ಸೈನಿಕನನ್ನು ತಕ್ಷಣವೇ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಗಾಯದ ತೀವ್ರತೆ ಹೆಚ್ಚಿದ್ದ ಕಾರಣ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಕಮಾಂಡ್ ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಲಾಗಿದೆ.
ವಿಶೇಷ ಸೇನಾ ಹೆಲಿಕಾಪ್ಟರ್ ಮೂಲಕ ಯೋಧನನ್ನು ಬೆಂಗಳೂರಿಗೆ ಏರ್‌ಲಿಫ್ಟ್ ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.

