HomeLatest NewsBREAKING : ನಟಿ ತ್ರಿಷಾ ಕುರಿತು ವಿವಾದಾತ್ಮಕ ಹೇಳಿಕೆ ; ಠಾಣಾ ಜಾಮೀನಿನ ಮೇಲೆ ಜೈಲಿನಿಂದ...

BREAKING : ನಟಿ ತ್ರಿಷಾ ಕುರಿತು ವಿವಾದಾತ್ಮಕ ಹೇಳಿಕೆ ; ಠಾಣಾ ಜಾಮೀನಿನ ಮೇಲೆ ಜೈಲಿನಿಂದ ‘ಉದಯನಿಧಿ ಸ್ಟಾಲಿನ್’ ರಿಲೀಸ್

ಚೆನ್ನೈ: ಕಾವೇರಿ ಹೋರಾಟದ ವೇಳೆ ನಟಿ ತ್ರಿಷಾ ಕುರಿತು ದ್ವಂದ್ವಾರ್ಥದ (ಡಬಲ್ ಮೀನಿಂಗ್) ಹೇಳಿಕೆ ನೀಡಿದ ಆರೋಪದಡಿ ಬಂಧಿತರಾಗಿದ್ದ ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ಮಂಗಳವಾರ ರಾತ್ರಿ ಪೊಲೀಸ್ ವಿಚಾರಣೆ ಬಳಿಕ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಪೊಲೀಸ್ ಠಾಣೆಯಿಂದ ಹೊರಬಂದ ವೇಳೆ ನೂರಾರು ಡಿಎಂಕೆ ಕಾರ್ಯಕರ್ತರು ಘೋಷಣೆ ಕೂಗಿ ಅವರನ್ನು ಸ್ವಾಗತಿಸಿದರು.

ಮೂಲತಃ ಉದಯನಿಧಿ ಸ್ಟಾಲಿನ್ ಅವರನ್ನು ತಂಜಾವೂರು ದಕ್ಷಿಣ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲು ಪೊಲೀಸರು ನಿರ್ಧರಿಸಿದ್ದರು. ಈ ಕುರಿತು ಮದ್ರಾಸ್ ಹೈಕೋರ್ಟ್‌ನಲ್ಲೂ ಮಾಹಿತಿ ನೀಡಲಾಗಿತ್ತು. ಆದರೆ, ತಂಜಾವೂರು ಪೊಲೀಸ್ ಠಾಣೆ ಸುತ್ತಮುತ್ತ ಡಿಎಂಕೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ, ಭದ್ರತಾ ಕಾರಣಗಳಿಂದ ಪೊಲೀಸರು ದಿಢೀರ್ ಯೋಜನೆ ಬದಲಿಸಿ, ಸುಮಾರು 21 ಕಿ.ಮೀ ದೂರದ ಸೆಂಗಿಪಟ್ಟಿ ಪೊಲೀಸ್ ಠಾಣೆಗೆ ಕರೆದೊಯ್ದರು.ಈ ಮಾರ್ಗ ಬದಲಾವಣೆಯಿಂದ ಡಿಎಂಕೆ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿ, ಅವರು ಕೂಡ ಸೆಂಗಿಪಟ್ಟಿ ಪೊಲೀಸ್ ಠಾಣೆಯತ್ತ ಧಾವಿಸಿದರು.

ಮೂಲಗಳ ಪ್ರಕಾರ, ಹೈಕೋರ್ಟ್‌ಗೆ ತಿಳಿಸಿದ್ದ ಪೊಲೀಸ್ ಠಾಣೆ ಇದು ಅಲ್ಲ ಎಂದು ಉದಯನಿಧಿ ಸ್ಟಾಲಿನ್ ಆರಂಭದಲ್ಲಿ ಪೊಲೀಸ್ ವಾಹನದಿಂದ ಇಳಿಯಲು ನಿರಾಕರಿಸಿದರು. ಕೆಲಕಾಲದ ಮಾತುಕತೆ ಬಳಿಕ ಅವರು ವಾಹನದಿಂದ ಇಳಿದು, ಪೊಲೀಸ್ ಠಾಣೆ ಹೊರಗೆ ಜಮಾಯಿಸಿದ್ದ ಕಾರ್ಯಕರ್ತರಿಗೆ ಕೈಬೀಸಿ ಅಭಿನಂದನೆ ಸ್ವೀಕರಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ಥಳದಲ್ಲಿ ನೂರಾರು ಡಿಎಂಕೆ ಕಾರ್ಯಕರ್ತರು ಉದಯನಿಧಿ ಪರ ಘೋಷಣೆಗಳನ್ನು ಕೂಗಿದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಕೇಂದ್ರ ವಲಯದ ಐಜಿಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು. ಇತ್ತ, ತಂಜಾವೂರು ದಕ್ಷಿಣ ಪೊಲೀಸ್ ಠಾಣೆ ಸುತ್ತಲೂ ಕೂಡ ಬಿಗಿ ಪೊಲೀಸ್ ಭದ್ರತೆ ಮುಂದುವರಿದಿತ್ತು.ಈ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್‌ಗೆ ಪೊಲೀಸರು, ಉದಯನಿಧಿ ಸ್ಟಾಲಿನ್ ಅವರನ್ನು ವಿಚಾರಣೆ ನಡೆಸಿ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರು.

ತ್ರಿಷಾ ಹೇಳಿಕೆ ಪ್ರಕರಣವೇನು?

ಸೋಮವಾರ ತಂಜಾವೂರಿನಲ್ಲಿ ನಡೆದ ಡಿಎಂಕೆ ಪ್ರತಿಭಟನೆಯ ವೇಳೆ ಉದಯನಿಧಿ ಸ್ಟಾಲಿನ್ ಭಾಷಣ ಮಾಡುತ್ತಿದ್ದಾಗ ಕೆಲವರು ನಟಿ ತ್ರಿಷಾ ಹೆಸರನ್ನು ಕೂಗಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಅವರು ಮಹಿಳೆಗೆ ಅವಮಾನವಾಗುವ ರೀತಿಯ ದ್ವಂದ್ವಾರ್ಥದ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.ಈ ಸಂಬಂಧ ಟಿವಿಕೆ (TVK) ಪಕ್ಷದ ಮುಖಂಡರು ನೀಡಿದ ದೂರಿನ ಆಧಾರದ ಮೇಲೆ ಮಂಗಳವಾರ ಬೆಳಗ್ಗೆ ಚೆನ್ನೈನ ನೀಲಂಕರೈ ನಿವಾಸದಲ್ಲಿ ಉದಯನಿಧಿ ಸ್ಟಾಲಿನ್ ಅವರನ್ನು ಪೊಲೀಸರು ಬಂಧಿಸಿದ್ದರು. ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS)ಯ ವಿವಿಧ ಸೆಕ್ಷನ್‌ಗಳಡಿ ಅಶ್ಲೀಲ ಪದಗಳ ಬಳಕೆ, ಮಹಿಳೆಯ ಘನತೆಗೆ ಧಕ್ಕೆ, ದ್ವೇಷ ಪ್ರಚೋದನೆ, ಗಲಭೆಗೆ ಪ್ರಚೋದನೆ, ಕ್ರಿಮಿನಲ್ ಬೆದರಿಕೆ ಸೇರಿದಂತೆ ತಮಿಳುನಾಡು ಮಹಿಳೆಯರ ಕಿರುಕುಳ ತಡೆ ಕಾಯ್ದೆ ಅಡಿಯಲ್ಲಿ ಕೂಡ ಪ್ರಕರಣ ದಾಖಲಿಸಲಾಗಿದೆ.

ರಾಜಕೀಯ ವಾಗ್ವಾದ

ಉದಯನಿಧಿ ಬಂಧನದ ಬಳಿಕ ತಮಿಳುನಾಡಿನಾದ್ಯಂತ ಡಿಎಂಕೆ ಕಾರ್ಯಕರ್ತರು ರಸ್ತೆ ತಡೆ ಹಾಗೂ ಪ್ರತಿಭಟನೆ ನಡೆಸಿದರು. ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್, ವಿಧಾನಸಭೆ ಅಧಿವೇಶನದಲ್ಲಿ ಉದಯನಿಧಿ ಭಾಗವಹಿಸದಂತೆ ಮಾಡಲು ಟಿವಿಕೆ ಸರ್ಕಾರ ರಾಜಕೀಯ ದುರುದ್ದೇಶದಿಂದ ಪೊಲೀಸರನ್ನು ಬಳಸಿಕೊಂಡಿದೆ ಎಂದು ಆರೋಪಿಸಿದರು. ಜಾಮೀನು ಸಿಗದಂತಹ ಪ್ರಕರಣಗಳನ್ನು ಉದ್ದೇಶಪೂರ್ವಕವಾಗಿ ದಾಖಲಿಸಲಾಗಿದೆ ಎಂದು ಅವರು ಟೀಕಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತಾರೂಢ ಟಿವಿಕೆ ಸರ್ಕಾರ, ಕಾನೂನು ತನ್ನ ಕೆಲಸ ಮಾಡುತ್ತಿದೆ. ಮಹಿಳೆಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡಿದೆ.

https://twitter.com/ANI/status/2084656690746872102/video/1

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular