ಬೆಳಗಾವಿ: ಬೆಂಗಳೂರಿನ ಅರಮನೆಯ ಮೈದಾನದಲ್ಲಿ ಫೆಬ್ರವರಿ 19ರಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಲಿದೆ. ಸಭೆಯಲ್ಲಿ ಮುಂದಿನ ಕೆಲವು ಸಂಘಟನಾತ್ಮಕ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯೇಂದ್ರ, ಕಾರ್ಯಕಾರಣಿ ಸಭೆಯಲ್ಲಿ ಜಿಲ್ಲಾಪಂಚಾಯತ್, ತಾಲೂಕು ಪಂಚಾಯತ್, ಗ್ರೇಟರ್ ಬೆಂಗಳೂರು, ವಿಧಾನಪರಿಷತ್ ಸ್ಥಾನಗಳ ಚುನಾವಣೆ, ರಾಜ್ಯ ಸರ್ಕಾರದ ವೈಫಲ್ಯ ಹಾಗೂ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.
ಕಾರ್ಯಕಾರಿಣಿ ಸಭೆ ಉದ್ಘಾಟನೆಗೆ ಹಿರಿಯ ಸಚಿವರು ಆಗಮಿಸಲಿದ್ದಾರೆ. ಸಮಾರೋಪ ಸಮಾರಂಭಕ್ಕೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಬರುತ್ತಾರೆ ಎಂದರು.
ಕಾಂಗ್ರೆಸ್ ಸರ್ಕಾರ ಜನರಿಗೆ ಹೇಗೆ ಮೋಸ ಮಾಡುತ್ತಿದೆ ಎಂಬುದರ ಬಗ್ಗೆಯೂ ಚರ್ಚಿಸಲಾಗುವುದು. ಸರ್ಕಾರದ ವೈಫಲ್ಯಗಳ ಬಗ್ಗೆ ಜಾಗೃತಿ ಮೂಡಿಸುತ್ತೇವೆ ಎಂದರು.
ಇದೇ ವೇಳೆ ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ಶಾಸಕರನ್ನು ತಾವೇ ವಿದೇಶ ಪ್ರವಾಸಕ್ಕೆ ಕಳಿಸುತ್ತಿದ್ದಾರೆ. ಈ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಗಳ ಪರಿಸ್ಥಿತಿ ಏನು ಅಂತಾ ಇದರಲ್ಲೆ ಗೊತ್ತಾಗುತ್ತದೆ. ಸರ್ಕಾರ ಬಂದ ಬಳಿಕ ಅನುದಾನಕ್ಕೆ ಬೇಡಿಕೆ ಇಟ್ಟಿದ್ದರು. ಸರ್ಕಾರದಿಂದ ಯಾವುದೇ ಹಣ ಕೊಡುತ್ತಿಲ್ಲ. ಅವರ ಸ್ವಂತ ಖರ್ಚಿನಲ್ಲಿ ಶಾಸಕರು ವಿದೇಶಕ್ಕೆ ಹೋಗುತ್ತಿದ್ದಾರೆ ಅಂತಾ ನಿನ್ನೆ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಆದರೆ, ತಮ್ಮ ಕುರ್ಚಿ ಉಳಿಸಿಕೊಳ್ಳಲು ತಾವೇ ಅವರನ್ನು ವಿದೇಶಕ್ಕೆ ಕಳಿಸುತ್ತಿದ್ದಾರೆ ಎಂದು ಕುಟುಕಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಕುರ್ಚಿಗಾಗಿ ಕಿತ್ತಾಟ ಆರಂಭವಾಗಿದೆ. ಅವರಿಗೆ ಅನುಕೂಲ ಆಗಲಿ ಅಂತಾ ಬಿಜೆಪಿಯಿಂದ ಬಡಿಗೆ ರೆಡಿ ಮಾಡಿಸಿದ್ದೇವೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಯಾರಿಗೆ ಹೇಳುತ್ತಾರೆ ಅವರಿಗೆ ಬಡಿಗೆ ಕೊಡುತ್ತೇವೆ. ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳಲಿ. ಆ ಹಂತಕ್ಕೆ ಅವರು ಬಂದಿದ್ದಾರೆ. ಮುಂದೆ ಏನಾಗುತ್ತೆ ಕಾದು ನೋಡೋಣ ಎಂದರು.

