ಬೆಳಗಾವಿ: ವಿಬಿ ಜಿ ರಾಮ್ ಜಿ ಯೋಜನೆ ಬಗ್ಗೆ ಚರ್ಚೆ ಹೆಸರಲ್ಲಿ ವಿಶೇಷ ಅಧಿವೇಶನ ಕರೆಯುವ ಮೂಲಕ ಮುಖ್ಯಮಂತ್ರಿ ಸಿದ್ದರಮಾಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಶಾಸನ ಸಭೆಯ ಪಾವಿತ್ರ್ಯತೆಯನ್ನು ಹಾಳು ಮಾಡಲು ಹೊರಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಬಿ.ವೈ.ವಿಜಯೇಂದ್ರ, ಸದನದಲ್ಲಿ ಈ ನಾಡಿನ ಜನರ ಒಳಿತಿನ ಬಗ್ಗೆ, ಯೋಜನೆಗಳು ಮತ್ತು ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಚರ್ಚೆ ಆಗಬೇಕಿತ್ತು. ಆದರೆ, ಕೇಂದ್ರ ಸರ್ಕಾರದ ವಿರುದ್ಧ ಜನರನ್ನು ಎತ್ತಿಕಟ್ಟಲು ಕಾಂಗ್ರೆಸ್ ನಾಯಕರು ವಿಶೇಷ ಅಧಿವೇಶನವನ್ನು ಕರೆದು ಸದನವನ್ನು ಬಳಸುತ್ತಿರುವುದನ್ನು ಖಂಡನೀಯ ಎಂದರು.
ಪ್ರಧಾನಿ ಮೋದಿಯವರು ಸುಧಾರಣೆಗಳನ್ನು ತಂದು ಮನರೇಗಾವನ್ನು ವಿಬಿ ಜಿ ರಾಮ್ ಜಿ ಯೋಜನೆಯನ್ನಾಗಿ ಮಾಡಿದ್ದಾರೆ. ದೇಶದ ಬಡವರು ಮತ್ತು ಕಾರ್ಮಿಕರಿಗೆ ಅನುಕೂಲವಾ ಗಬೇಕು ಎಂದು ಈ ಕಾಯ್ದೆಯನ್ನು ತಂದಿದ್ದಾರೆ. ಈ ಬಗ್ಗೆ ಚರ್ಚೆ ಮಾಡಬೇಕು ಎನ್ನುವ ನೆಪದಲ್ಲಿ ವಿಶೇಷ ಅಧಿವೇಶನ ಕರೆದು, ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರದ ವಿರುದ್ಧ ದ್ವೇಷ ಸಾಧಿಸಲು ಕಾಂಗ್ರೆಸ್ ಹೊರಟಿದೆ ಎಂದು ಕಿಡಿಕಾರಿದರು.
ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಯ ಬಗ್ಗೆ ಪದೇ ಪದೇ ಮಾತನಾಡುವ ಸಿಎಂ ಸಿದ್ದರಾಮಯ್ಯ ಅವರು ಒಕ್ಕೂಟ ವ್ಯವಸ್ಥೆ ಹಾಳು ಮಾಡುವಂತ ಕುತಂತ್ರವನ್ನು ನಡೆಸುತ್ತಿರುವುದು ಇದರಿಂದ ಗೊತ್ತಾಗುತ್ತಿದೆ. ನಾಡಿನ ಹಿತವನ್ನು ಮರೆತು ಕೇಂದ್ರ ಸರ್ಕಾರದ ವಿರುದ್ಧ ವಿಷ ಕಾರುವ ರಾಜ್ಯದ ಮುಖ್ಯಮಂತ್ರಿಗಳು ರಾಜ್ಯದ ಒಳಿತಿನ ಬಗ್ಗೆ ಚಿಂತನೆ ಮಾಡದೇ ಜನರನ್ನು ಎತ್ತಿ ಕಟ್ಟುವುದರಲ್ಲೆ ಎರಡೂವರೇ ವರ್ಷ ಕಳೆದಿದ್ದಾರೆ ಎನ್ನುವುದು ಸತ್ಯ ಎಂದರು.
ವಿಶೇಷ ಅಧಿವೇಶನ ನಡೆಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಣಾಕ್ಷ ನಡೆ ಅನುಸರಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುವುದು ಒಂದು ಆದ್ಯತೆಯಾದರೆ, ಮತ್ತೊಂದು ಕಡೆ ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳುವುದಕ್ಕೆ ಕಾಲಹರಣ ಮಾಡುತ್ತಾ, ಡಿ.ಕೆ.ಶಿವಕುಮಾರ್ ಅವರಿಗೆ ಕೈ ಕೊಡುವುದು ಅವರ ಉದ್ದೇಶ. ಈ ವಿಶೇಷ ಅಧಿವೇಶನವನ್ನು ಇದಕ್ಕಾಗಿಯೇ ಬಳಸಿಕೊಳ್ಳುತ್ತಿದ್ದಾರೆ ಎಂದು ವಿಜಯೇಂದ್ರ ಆರೋಪಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಸಮೀಪಿಸುತ್ತಿವೆ. ಏನು ಸಾಧನೆ ಮಾಡಿದ್ದಾರೆ? ಕೊಟ್ಟಿರುವ ಜನಪರ ಯೋಜನೆಗಳಾದರೂ ಯಾವುದು? ಜನರಿಗೆ ಆಗುತ್ತಿರುವ ಅನುಕೂಲಗಳಾದರೂ ಏನು? ಏನು ಕಡೆದು ಕಟ್ಟೆ ಹಾಕಿದ್ದಿರಿ…? ಇದರ ಬಗ್ಗೆ ಅಧಿವೇಶನದಲ್ಲಿ ಚರ್ಚೆಯಾದರೆ ಒಳಿತು ಎಂದು ವಾಗ್ದಾಳಿ ನಡೆಸಿದ್ದಾರೆ.

