ನಿನ್ನೆ ( ಏಪ್ರಿಲ್ 25 ) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಲೀಗ್ ಹಂತದ 35 ಮತ್ತು 36ನೇ ಪಂದ್ಯಗಳು ಜರುಗಿದವು. ಎರಡೂ ಪಂದ್ಯಗಳು ಸೇರಿದಂತೆ ಬರೋಬ್ಬರಿ 986 ರನ್‌ಗಳ ಹೊಳೆಯೇ ಹರಿದುಬಂತು.
ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವೆ ನಡೆದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 264 ರನ್ ಕಲೆಹಾಕಿ ಪಂಜಾಬ್ ಕಿಂಗ್ಸ್ ತಂಡಕ್ಕೆ 265 ರನ್ ಗಳ ಬೃಹತ್ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ 18.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 265 ರನ್ ಬಾರಿಸಿ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಗುರಿ ಬೆನ್ನಟ್ಟಿದ ದಾಖಲೆ ಬರೆಯಿತು.
ನಂತರ ನಡೆದ ಎರಡನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 228 ರನ್ ಕಲೆಹಾಕಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ 229 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್ ಅರ್ಧಶತಕಗಳ ನೆರವಿನಿಂದ 18.3 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 229 ರನ್ ಕಲೆಹಾಕಿತು.
ಎರಡೂ ಪಂದ್ಯಗಳಲ್ಲಿ ರನ್ ಹೊಳೆಯ ಜತೆಗೆ ಕ್ಯಾಚ್ ಡ್ರಾಪ್ ಮಾಡಿದ ಘಟನೆಗಳು ಸಾಕಷ್ಟು ಸದ್ದು ಮಾಡುತ್ತಿವೆ. ಎರಡೂ ಪಂದ್ಯ ಸೇರಿ ಹತ್ತಕ್ಕೂ ಹೆಚ್ಚು ಕ್ಯಾಚ್ ಡ್ರಾಪ್‌ಗಳಾಗಿವೆ. ಅದರಲ್ಲಿ ಹೆಚ್ಚು ಪರಿಣಾಮ ಬೀರಿದ ಕ್ಯಾಚ್ ಡ್ರಾಪ್ ಎಂದರೆ ಪಂಜಾಬ್ ಕಿಂಗ್ಸ್ ದಾಖಲೆಯ ರನ್ ಚೇಸ್ ವೇಳೆ ಕರುಣ್ ನಾಯರ್ ಕೈಚೆಲ್ಲಿದ ಶ್ರೇಯಸ್ ಐಯ್ಯರ್‌ನ ಎರಡು ಕ್ಯಾಚ್‌ಗಳು.
ಮೊದಲಿಗೆ ಡೆಲ್ಲಿಗೆ 31 ಎಸೆತಗಳಲ್ಲಿ ಗೆಲ್ಲಲು 63 ರನ್‌ಗಳ ಅಗತ್ಯವಿದ್ದಾಗ ವಿಪ್ರಾಜ್ ನಿಗಮ್ ಎಸೆದ 15ನೇ ಓವರ್‌ನ ಕೊನೆಯ ಎಸೆತದಲ್ಲಿ ಕೈಗೆ ಬಂದ ಸುಲಭ ಕ್ಯಾಚನ್ನು ಕರುಣ್ ಕೈಚೆಲ್ಲಿದ ಕರುಣ್ ನಾಯರ್ ಕುಲ್‌ದೀಪ್ ಯಾದವ್ ಮಾಡಿದ 16ನೇ ಓವರ್‌ನ ಎರಡನೇ ಎಸೆತದಲ್ಲಿ ಕರುಣ್ ನಾಯತ್ ಮತ್ತೆ ಶ್ರೇಯಸ್‌ನ ಕ್ಯಾಚ್ ಚೆಲ್ಲಿದರು.
ಈ ಕುರಿತು ಪಂದ್ಯದ ಬಳಿಕ ಮಾತನಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಸಹ ಮಾತನಾಡಿ ಬೇಸರ ಹೊರಹಾಕಿದ್ದಾರೆ. ‘ಸುಲಭವಾಗಿ ರನ್ ಹರಿದುಬರುವ ಇಂಥ ಮೈದಾನದಲ್ಲಿ ಒಳ್ಳೆಯ ಫೀಲ್ಡಿಂಗ್ ಮಾಡದೇ ಕ್ಯಾಚ್ ಡ್ರಾಪ್ ಮಾಡುವ ಮೂಲಕ ನೀವು ನಿಮ್ಮ ಬೌಲರ್‌ಗಳಿಗೆ ಬೆಂಬಲ ನೀಡದಿದ್ದರೆ, ಸೋಲಿಗೆ ಅರ್ಹರು. ಅದು ಪ್ರಮುಖ ಅಂಶ. ಇದು ಚಿಕ್ಕ ಸಣ್ಣ ಮೈದಾನ, ಸಿಕ್ಸರ್‌ಗಳು ಸರಾಗವಾಗಿ ಹರಿದುಬರುತ್ತವೆ. ಅಂತಹ ಸಂದರ್ಭದಲ್ಲಿ ಕ್ಯಾಚ್‌ಗಳು ಬಂದಾಗ ಒಂದನ್ನೂ ಸಹ ಪಡೆಯದೇ ಬೌಲರ್‌ಗಳನ್ನು ಬೆಂಬಲಿಸದಿದ್ದರೆ ಕಷ್ಟವಾಗುತ್ತದೆ. ತಂಡ 264 ರನ್ ಕಲೆಹಾಕಿತು, ಅದೂ ಸಹ ಐಪಿಎಲ್‌ನಲ್ಲಿ ದಾಖಲೆಯ ಮೊತ್ತ. ಅವಕಾಶ ಸಿಕ್ಕಾಗ ಅದನ್ನು ಬಳಸಿಕೊಳ್ಳದಿದ್ದರೆ ಇಂಥ ಪಂದ್ಯವನ್ನೂ ಸಹ ಕೈಚೆಲ್ಲಬೇಕಾಗುತ್ತದೆ’ ಎಂದು ಹೇಳಿಕೆ ನೀಡಿದ್ದಾರೆ.

