ಇಂದು ( ಜೂನ್ 4 ) ಪಾಕಿಸ್ತಾನದ ಲಾಹೋರ್‌ನ ಗಡ್ಡಾಫಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಫೈನಲ್ ಪಂದ್ಯ ನಡೆಯುತ್ತಿದೆ.
ಮೊದಲ ಪಂದ್ಯದಲ್ಲಿ ಪಾಕ್ ಹಾಗೂ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದ ಕಾರಣ ಈ ಪಂದ್ಯದಲ್ಲಿ ಗೆದ್ದವರಿಗೆ ಟ್ರೋಫಿ ಸಿಗುವ ಕಾರಣ ಈ ಪಂದ್ಯ ಫೈನಲ್ ಪಂದ್ಯವಾಗಿ ಮಾರ್ಪಟ್ಟಿದೆ. ಇನ್ನು ಆಸ್ಟ್ರೇಲಿಯಾ ಪಾಕ್ ನೆಲದಲ್ಲಿ ಏಕದಿನ ಸರಣಿಯನ್ನು ಕೊನೆಯದಾಗಿ ಗೆದ್ದದ್ದು 1988 ಹಾಗೂ 99ರಲ್ಲಿ.
ಹೀಗಾಗಿ ಇಂದಿನ ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದು ಸರಣಿ ವಶಪಡಿಸಿಕೊಂಡರೆ ಬರೋಬ್ಬರಿ 28 ವರ್ಷಗಳ ಬಳಿಕ ಪಾಕ್ ನೆಲದಲ್ಲಿ ಏಕದಿನ ಸರಣಿ ಗೆದ್ದ ಮಹಾ ಇತಿಹಾಸ ನಿರ್ಮಾಣವಾಗಲಿದೆ.
ಆದರೆ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 42 ಓವರ್‌ಗಳಲ್ಲಿ ಕೇವಲ 157 ರನ್‌ಗಳಿಗೆ ಆಲ್‌ಔಟ್ ಆಗುವ ಮೂಲಕ ಭಾರೀ ಹಿನ್ನಡೆ ಅನುಭವಿಸಿ ಪಾಕಿಸ್ತಾನಕ್ಕೆ 158 ರನ್‌ಗಳ ಸುಲಭ ಗುರಿಯನ್ನು ನೀಡಿದೆ.
ಆಸ್ಟ್ರೇಲಿಯಾ ಪರ ನಾಯಕ ಜೋಶ್ ಇಂಗ್ಲಿಸ್ 65 ರನ್ ಗಳಿಸಿದ್ದು ಬಿಟ್ಟರೆ ಹೊರತುಪಡಿಸಿದರೆ ಉಳಿದ ಯಾವ ಆಟಗಾರನೂ ಸಹ ಉತ್ತಮ ಬ್ಯಾಟಿಂಗ್ ಮಾಡದೇ ಪೆವಿಲಿಯನ್ ಪರೇಡ್ ನಡೆಸಿ ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.
ಮ್ಯಾಥ್ಯೂ ಶಾರ್ಟ್ ಇನ್ನಿಂಗ್ಸ್‌ನ ಎರಡನೇ ಎಸೆತದಲ್ಲಿ ಡಕ್ಔಟ್ ಆಗುವ ಮೂಲಕ ತಂಡ ಕೆಟ್ಟ ಆರಂಭ ಪಡೆದುಕೊಂಡಿತು. ಮಾರ್ನಸ್ ಲ್ಯಾಬುಷೇನ್ 19, ಅಲೆಕ್ಸ್ ಕ್ಯಾರಿ 19, ಕ್ಯಾಮೆರಾನ್ ಗ್ರೀನ್ 7, ಮ್ಯಾಟ್ ರೆನ್ಷಾ 4, ಕೂಪರ್ ಕೊನೊಲಿ 3, ಒಲಿವರ್ ಪೀಕ್ 7, ಆಡಂ ಜಂಪಾ 10, ನಾಥನ್ ಎಲ್ಲಿಸ್ 1 ಹಾಗೂ ಮ್ಯಾಥ್ಯೂ ಕುನ್ಹೆಮನ್ ಅಜೇಯ 9 ರನ್ ಕಲೆಹಾಕಿದರು.
ಪಾಕಿಸ್ತಾನದ ಪರ ಶಾಹಿದ್ ಅಫ್ರಿದಿ ಮೂರು ವಿಕೆಟ್, ಅಬ್ರಾರ್ ಅಹ್ಮದ್ ಹಾಗೂ ಶದಬ್ ಖಾನ್ ತಲಾ ಎರಡು ವಿಕೆಟ್ ಮತ್ತು ಹ್ಯಾರಿಸ್ ರೌಫ್ ಒಂದು ವಿಕೆಟ್ ಪಡೆದರು.

