ಮಂಡ್ಯ: ಸಲೂನ್ ಅಂಡ್ ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ಮೈಸೂರಿನ ಒಡನಾಡಿ ಸಂಸ್ಥೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದು, ನಾಲ್ವರು ಮಹಿಳೆಯರನ್ನು ರಕ್ಷಿಸಿದ್ದಾರೆ.
ಮಂಡ್ಯ ನಗರದ ಬೆಂಗಳೂರು -ಮೈಸೂರು ಹೆದ್ದಾರಿಯ ಪ್ರತಿಷ್ಠಿತ ಕಾಲೇಜು ಪಕ್ಕದಲ್ಲಿರುವ ಯೂನಿಸೆಕ್ಸ್ ಸಲೂನ್ ಅಂಡ್ ಸ್ಪಾ ಮೇಲೆ ದಾಳಿ ನಡೆಸಿ ದಂಧೆ ನಡೆಸುತ್ತಿದ್ದ ಸಲೂನ್ ಮಾಲಕಿ ಎಲಿಜಬೆತ್, ಓರ್ವ ಪಿಂಪ್ ಮತ್ತು ಗ್ರಾಹಕನೊಬ್ಬನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಹಲವು ವರ್ಷಗಳಿಂದ ಸಲೂನ್ ಅಂಡ್ ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದು, ಈ ಹಿಂದೆಯೂ ದಾಳಿ ನಡೆಸಲಾಗಿತ್ತು. ಮಾಲಕಿ ಎಲಿಜಬೆತ್ ವಿರುದ್ಧ ಈ ಹಿಂದೆ ಮೈಸೂರು, ಮಂಡ್ಯದಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಹೇಳಲಾಗಿದೆ.
ಹೊರಗಿನಿಂದ ಮಹಿಳೆಯರನ್ನು ಕರೆತಂದು ಪಕ್ಕದ ಕಾಲೇಜು ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರನ್ನು ಗುರಿಯಾಗಿಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸಿದ ಆರೋಪ ಕೇಳಿ ಬಂದಿದ್ದು, ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಪರಶುರಾಮ್, ಸಿಪಿಐ ನವೀನ್ ಸುಪ್ಟೇಕರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.