HomeKarnatakaವಸತಿ ಶಾಲೆಯ ಐವರು ಶಿಕ್ಷಕರು ಸೇರಿ 90ಕ್ಕೂ ಅಧಿಕ ಮಕ್ಕಳಿಗೆ ವೈರಲ್ ಫೀವರ್

ವಸತಿ ಶಾಲೆಯ ಐವರು ಶಿಕ್ಷಕರು ಸೇರಿ 90ಕ್ಕೂ ಅಧಿಕ ಮಕ್ಕಳಿಗೆ ವೈರಲ್ ಫೀವರ್

ಹಾವೇರಿ: ಬಾಡ ಗ್ರಾಮದ ಬಳಿಯ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ 90ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವೈರಲ್ ಫೀವರ್ ಉಂಟಾಗಿದೆ.

ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿರುವ ಹಾಸ್ಟೆಲ್ ವಿದ್ಯಾರ್ಥಿಗಳು ಕೆಮ್ಮು, ಶೀತ, ಜ್ವರದಿಂದ ಬಳಲುತ್ತಿದ್ದಾರೆ. 90ಕ್ಕೂ ಹೆಚ್ಚು ಮಕ್ಕಳಿಗೆ ಅನಾರೋಗ್ಯ ಉಂಟಾದ ಹಿನ್ನೆಲೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ.

ಪೋಷಕರನ್ನು ಕರೆಸಿದ ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದ್ದಾರೆ. ಕೆಲವು ದಿನಗಳ ಹಿಂದೆ ಹುನಗುಂದದಲ್ಲಿ ನಡೆದ ಕ್ರೀಡಾಕೂಟದಲ್ಲಿ ಮಕ್ಕಳು ಭಾಗಿಯಾಗಿದ್ದರು. ಕ್ರೀಡಾಕೂಟದಲ್ಲಿ ಹಾಸ್ಟೆಲ್ ಮಕ್ಕಳಿಗೆ ವೈರಲ್ ಫೀವರ್ ಹರಡಿರುವ ಶಂಕೆ ವ್ಯಕ್ತವಾಗಿದೆ. ವಸತಿ ಶಾಲೆಯಲ್ಲಿ 530ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಐವರು ಶಿಕ್ಷಕರು ಸೇರಿದಂತೆ ಮಕ್ಕಳಿಗೂ ವೈರಲ್ ಫೀವರ್ ಬಂದಿದೆ. ಎಲ್ಲರೂ ಚೇತರಿಸಿಕೊಂಡಿದ್ದಾರೆ. ಸದ್ಯ ಭಯಪಡುವ ಅಗತ್ಯವಿಲ್ಲ. ವಸತಿ ಶಾಲೆಯಲ್ಲಿ ಸ್ವಚ್ಛತೆ, ಗುಣಮಟ್ಟಕ್ಕೆ ಆದ್ಯತೆ ನೀಡಲಾಗಿದೆ ಎಂದು ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ಪ್ರಾಂಶುಪಾಲ ಪ್ರಕಾಶ್ ಹೇಳಿದ್ದಾರೆ.(ಚಿತ್ರಕೃಪೆ: ಎಐ)

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ʻವಿದ್ಯಾರ್ಥಿ ಸಹಾಯಹಸ್ತʼ ಯೋಜನೆ ಜಾರಿ: ವೃತ್ತಿಪರ ಕೋರ್ಸ್ ಸೇರ್ಪಡೆಗೆ ವಿಶೇಷ ಮೀಸಲಾತಿ

ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯವರೆಗೆ ಮತ್ತು ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದ ಅರ್ಹ ಗ್ರಾಮೀಣ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳಿಗೆ ಸೇರುವಾಗ 7.5% ವಿಶೇಷ ಮೀಸಲಾತಿ ನೀಡುವ ʻವಿದ್ಯಾರ್ಥಿ ಸಹಾಯಹಸ್ತʼ ಯೋಜನೆ ಜಾರಿಗೆ ತರುವ ಉದ್ದೇಶದಿಂದ “ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ (ಸರ್ಕಾರಿ ಸೀಟುಗಳ ಪ್ರವೇಶಕ್ಕಾಗಿ ಅಭ್ಯರ್ಥಿಗಳ ಆಯ್ಕೆ) ನಿಯಮಗಳು, 2006″ಕ್ಕೆ ತಿದ್ದುಪಡಿ ತಂದು ಕರಡು ಅಧಿಸೂಚನೆ ಹೊರಡಿಸಲಾಗಿದ್ದು, ಇದಕ್ಕೆ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿದೆ.

ಈ ತಿದ್ದುಪಡಿ ಅಧಿಸೂಚನೆಯನ್ನು ʻಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಸರ್ಕಾರಿ ಸೀಟುಗಳ ಪ್ರವೇಶಕ್ಕಾಗಿ ಅಭ್ಯರ್ಥಿಗಳ ಆಯ್ಕೆ (ತಿದ್ದುಪಡಿ) ನಿಯಮಗಳು, 2026” ಎಂದು ಕರೆಯಲಾಗುತ್ತದೆ. ಇದುವರೆಗೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಒಟ್ಟಾರೆ 15%  ಮೀಸಲಾತಿ ನೀಡಲಾಗುತ್ತಿತ್ತು. ಇದರಲ್ಲಿ ಇನ್ನುಮುಂದೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇಕಡ 7.5ರಷ್ಟು ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಯಾವುದೇ (ಖಾಸಗಿ ಸೇರಿದಂತೆ) ಶಿಕ್ಷಣ ಸಂಸ್ಥೆಗಳು/ಶಾಲೆಗಳಲ್ಲಿ ವ್ಯಾಸಂಗ ಮಾಡಿದ ಅರ್ಹ ಗ್ರಾಮೀಣ ಅಭ್ಯರ್ಥಿಗಳಿಗೆ ಶೇಕಡ 7.5 ರಷ್ಟು ಮೀಸಲಾತಿ ನೀಡಲಾಗುತ್ತದೆ. ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಉಳಿಸುವ ಮತ್ತು ಬಲಪಡಿಸುವ ನಿಟ್ಟಿನಲ್ಲಿ ಇದು ಮಹತ್ವದ ತೀರ್ಮಾನ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ನಮ್ಮ ಸರ್ಕಾರ ಈ ತೀರ್ಮಾನವನ್ನು ತೆಗೆದುಕೊಂಡಿರುವ ಈ ಹೊತ್ತಿನಲ್ಲಿ ಅಪ್ಪಾಜಿಯವರನ್ನು ನಾನು ಬಹಳವಾಗಿ ನೆನಪಿಸಿಕೊಳ್ಳುತ್ತೇನೆ. ಏಕೆಂದರೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಈ ಮೀಸಲಾತಿ ದೊರೆಯುವಂತೆ ಮಾಡಿದವರೇ ಮಾಜಿ ಮುಖ್ಯಮಂತ್ರಿ ಎಸ್.‌ ಬಂಗಾರಪ್ಪನವರು. ಅವರು ಮುಖ್ಯಮಂತ್ರಿಗಳಾಗಿದ್ದಾಗ ಗ್ರಾಮೀಣ ಭಾಗದ ಯುವಜನರು ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗಿ, ಆಡಳಿತ ಯಂತ್ರದ ಭಾಗವಾಗಬೇಕೆಂಬ ಉದ್ದೇಶದಿಂದ ಗ್ರಾಮೀಣ ಕೃಪಾಂಕ ನೀಡುವ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದ್ದರು. ನಂತರ ನ್ಯಾಯಾಲಯದ ಆದೇಶದಂತೆ ಗ್ರಾಮೀಣ ಅಭ್ಯರ್ಥಿಗಳಿಗೆ ಕೃಪಾಂಕ ನೀಡುವ ಬದಲಾಗಿ, ಮೀಸಲಾತಿಯನ್ನು ಜಾರಿಗೆ ತರಲಾಯಿತು. ವೃತ್ತಿಪರ ಕೋರ್ಸ್‌ಗಳಿಗೆ ಸೇರುವಾಗ ಗ್ರಾಮೀಣ ವಿದ್ಯಾರ್ಥಿಗಳಿಗೆ, ಸರ್ಕಾರಿ ನೇಮಕಾತಿಯಲ್ಲಿ ಗ್ರಾಮೀಣ ಅಭ್ಯರ್ಥಿಗಳಿಗೆ ಈಗ ಶೇಕಡ 15 ರಷ್ಟು ಮೀಸಲಾತಿ ದೊರೆಯುತ್ತಿದೆ ಎಂದು ತಿಳಿಸಿದ್ದಾರೆ.

ನಾನು ಶಿಕ್ಷಣ ಸಚಿವನಾಗಿರುವಾಗ, ಈ ಮೀಸಲಾತಿಯಲ್ಲಿ ಇನ್ನೊಂದಿಷ್ಟು ಸುಧಾರಣೆ ತಂದು, ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳಿಗೆ ಈ ಮೀಸಲಾತಿಯ ಲಾಭ ಖಚಿತವಾಗಿ ದೊರೆಯುವಂತೆ ಮಾಡುತ್ತಿದ್ದೇನೆ. ಈ ಕಾರ್ಯ ನನ್ನಲ್ಲಿ ಒಂದು ರೀತಿಯಲ್ಲಿ ತೃಪ್ತಿ, ಸಾರ್ಥಕತೆಯ ಭಾವ ಮೂಡಿಸಿದೆ. ಗ್ರಾಮೀಣ ಮಕ್ಕಳ ಏಳಿಗೆಯನ್ನು ಗಮನದಲ್ಲಿಟ್ಟುಕೊಂಡು ಈ ರೀತಿಯ ಕ್ರಾಂತಿಕಾರಕ ತೀರ್ಮಾನವನ್ನು ಅಂದೇ ತೆಗೆದುಕೊಂಡಿದ್ದ ಅಪ್ಪಾಜಿಗೆ ಇದೆಲ್ಲದರ ಗೌರವ ಸಲ್ಲಬೇಕು ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular