ಲಂಡನ್: ಜಾಗತಿಕವಾಗಿ ಕೋವಿಶೀಲ್ಡ್ ಮತ್ತು ವಾಕ್ಸ್‌ಜೆವ್ರಿಯಾ ಎಂಬ ಹೆಸರುಗಳಲ್ಲಿ ಮಾರಾಟವಾಗುತ್ತಿರುವ ಅಸ್ಟ್ರಾಜೆನೆಕಾ ಕಂಪನಿಯ ಕೋವಿಡ್-19 ಲಸಿಕೆಯು ಅಪರೂಪವಾದರೂ ಗಂಭೀರವಾದ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (ಟಿಟಿಎಸ್) ಎಂಬ ರಕ್ತ ಹೆಪ್ಪುಗಟ್ಟುವ ಸ್ಥಿತಿಗೆ ಕಾರಣವಾಗಬಹುದು ಎಂದು ಕಂಪನಿಯು ಇದೀಗ ಅಧಿಕೃತವಾಗಿ ಒಪ್ಪಿಕೊಂಡಿದೆ. ಲಸಿಕೆಯಿಂದ ಗಾಯಗಳು ಮತ್ತು ಸಾವುಗಳು ಸಂಭವಿಸಿವೆ ಎಂದು ಆರೋಪಿಸಿ ದಾಖಲಾಗಿರುವ ಹಲವು ಕಾನೂನು ದಾವೆಗಳ ಹಿನ್ನೆಲೆಯಲ್ಲಿ ಅಸ್ಟ್ರಾಜೆನೆಕಾ ಈ ಮಹತ್ವದ ಹೇಳಿಕೆ ನೀಡಿದೆ.
ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (ಟಿಟಿಎಸ್) ಒಂದು ಅಪರೂಪದ ಕಾಯಿಲೆಯಾಗಿದ್ದು, ಇದರಲ್ಲಿ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುತ್ತದೆ ಮತ್ತು ರಕ್ತದಲ್ಲಿನ ಪ್ಲೇಟ್‌ಲೆಟ್‌ಗಳ ಸಂಖ್ಯೆ ತೀವ್ರವಾಗಿ ಕಡಿಮೆಯಾಗುತ್ತದೆ. ಕೇರಳದ ಐಎಂಎ ಕೋವಿಡ್-19 ಕಾರ್ಯಪಡೆಯ ಸಹ-ಅಧ್ಯಕ್ಷ ಡಾ. ರಾಜೀವ್ ಜಯದೇವನ್ ಅವರ ಪ್ರಕಾರ, ಈ ಅಡ್ಡಪರಿಣಾಮಗಳು ಅಪರೂಪವಾದರೂ ಗಂಭೀರವಾಗಿರಬಹುದು ಮತ್ತು ಮೆದುಳು ಅಥವಾ ಇತರ ಪ್ರಮುಖ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗಿ ಜೀವಕ್ಕೆ ಅಪಾಯವನ್ನುಂಟುಮಾಡಬಹುದು.
2021ರ ಏಪ್ರಿಲ್‌ನಲ್ಲಿ ಅಸ್ಟ್ರಾಜೆನೆಕಾ ಲಸಿಕೆ ಪಡೆದ ನಂತರ ಗಂಭೀರ ಅಡ್ಡಪರಿಣಾಮಗಳನ್ನು ಅನುಭವಿಸಿದ ಜೇಮಿ ಸ್ಕಾಟ್ ಎಂಬ ವ್ಯಕ್ತಿಯು ದಾಖಲಿಸಿದ ಕಾನೂನು ಪ್ರಕರಣದ ನಂತರ ಕಂಪನಿಯು ಈ ಒಪ್ಪಿಗೆ ನೀಡಿದೆ. ಲಸಿಕೆಯಿಂದ ಉಂಟಾದ ತಪ್ಪು ಗಾಯ ಅಥವಾ ಸಾವಿಗೆ ಸಂಬಂಧಿಸಿದ ಹಲವಾರು ಪ್ರಕರಣಗಳಲ್ಲಿ ಇದೂ ಒಂದಾಗಿದೆ.
ಭಾರತದಲ್ಲಿ ವ್ಯಾಪಕವಾಗಿ ಬಳಸಲಾದ ಕೋವಿಶೀಲ್ಡ್, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಉತ್ಪಾದಿಸುವ ಅಸ್ಟ್ರಾಜೆನೆಕಾ ಲಸಿಕೆಯ ಭಾರತೀಯ ಆವೃತ್ತಿಯಾಗಿದೆ. ಆದರೆ ಯುಕೆ ನ್ಯಾಯಾಲಯದಲ್ಲಿನ ಈ ಬಹಿರಂಗಪಡಿಸುವಿಕೆ ಮತ್ತು ರಕ್ತ ಹೆಪ್ಪುಗಟ್ಟುವಿಕೆಯ ಕಾಳಜಿಗಳ ಬಗ್ಗೆ ಸೀರಮ್ ಇನ್‌ಸ್ಟಿಟ್ಯೂಟ್ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಅಸ್ಟ್ರಾಜೆನೆಕಾ-ಆಕ್ಸ್‌ಫರ್ಡ್ ಲಸಿಕೆಯನ್ನು ಯುಕೆ ಯಲ್ಲಿ ಇನ್ನು ಮುಂದೆ ನೀಡಲಾಗುತ್ತಿಲ್ಲ. ವಿಶೇಷವಾಗಿ ಎಂಆರ್‌ಎನ್‌ಎ ಲಸಿಕೆಗಳಿಗೆ ಹೋಲಿಸಿದರೆ ಅದರ ಸುರಕ್ಷತಾ ಗುಣಲಕ್ಷಣಗಳ ಬಗ್ಗೆ ಇರುವ ಕಾಳಜಿಯೇ ಇದಕ್ಕೆ ಮುಖ್ಯ ಕಾರಣ. 2023 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಸಹ ಲಸಿಕೆ ಹಾಕಿದ ನಂತರ ಅಪರೂಪದ ಸಂದರ್ಭಗಳಲ್ಲಿ ಟಿಟಿಎಸ್ ಅಪಾಯವನ್ನು ಗುರುತಿಸಿತ್ತು.