ಟೀಮ್ ಇಂಡಿಯಾದ ಸಾರ್ವಕಾಲಿಕ ಶ್ರೇಷ್ಠ ಪುರುಷ ಕ್ರಿಕೆಟಿಗ ಯಾರು ಎಂಬ ಕುತೂಹಲಕಾರಿ ಪ್ರಶ್ನೆಗೆ ಭಾರತ ತಂಡದ ಮಾಜಿ ಪ್ರಮುಖ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ. ಇತ್ತೀಚೆಗೆ ಕ್ರೀಡಾ ವೆಬ್‌ಸೈಟ್ ಒಂದರ ವಿಶೇಷ ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದ ಅಶ್ವಿನ್, ಭಾರತೀಯ ಕ್ರಿಕೆಟ್‌ನ ದಿಗ್ಗಜರ ಪಟ್ಟಿಯಲ್ಲಿ ‘ಮಾಸ್ಟರ್ ಬ್ಲಾಸ್ಟರ್’ ಸಚಿನ್ ತೆಂಡೂಲ್ಕರ್ ಅವರನ್ನು ಸರ್ವಶ್ರೇಷ್ಠ ಆಟಗಾರ ಎಂದು ಹೆಸರಿಸಿದ್ದಾರೆ.
ಈ ಆಯ್ಕೆ ಪ್ರಕ್ರಿಯೆಯನ್ನು ನಾಕೌಟ್ ಮಾದರಿಯಲ್ಲಿ ನಡೆಸಲಾಗಿತ್ತು. ಆರಂಭಿಕ ಸುತ್ತಿನಲ್ಲಿ ವಿಜಯ್ ಹಜಾರೆ ಅವರಿಗಿಂತ ಸಚಿನ್ ತೆಂಡೂಲ್ಕರ್ ಅವರನ್ನು ಬೆಂಬಲಿಸಿದ ಅಶ್ವಿನ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವಿನ ಪೈಪೋಟಿಯಲ್ಲಿ ಕೊಹ್ಲಿ ಪರವಾಗಿ ನಿಂತರು. ಇನ್ನು ಎಂಎಸ್ ಧೋನಿ ಮತ್ತು ರವೀಂದ್ರ ಜಡೇಜಾ ನಡುವೆ ಆಯ್ಕೆ ಮಾಡುವ ಸಂದರ್ಭ ಬಂದಾಗ, ಭಾರತಕ್ಕೆ ಎರಡು ವಿಶ್ವಕಪ್ ಗೆದ್ದು ಕೊಟ್ಟ ಮಾಜಿ ನಾಯಕ ಧೋನಿ ಅವರನ್ನೇ ಅಶ್ವಿನ್ ಆರಿಸಿಕೊಂಡರು. ಸುನಿಲ್ ಗವಾಸ್ಕರ್, ವಿರೇಂದರ್ ಸೆಹ್ವಾಗ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಹಾಗೂ ಸ್ವತಃ ಅಶ್ವಿನ್ ಅವರ ಹೆಸರುಗಳು ಈ ರೇಸ್‌ನಲ್ಲಿದ್ದವು. ಅಂತಿಮವಾಗಿ ಕಪಿಲ್ ದೇವ್ ಮತ್ತು ಸಚಿನ್ ತೆಂಡೂಲ್ಕರ್ ನಡುವೆ ಅಂತಿಮ ಹಣಾಹಣಿ ಏರ್ಪಟ್ಟಿತ್ತು. ಈ ವೇಳೆ ಅಶ್ವಿನ್, ಸಚಿನ್ ತೆಂಡೂಲ್ಕರ್ ಅವರನ್ನು ಭಾರತದ ಸರ್ವಶ್ರೇಷ್ಠ ಕ್ರಿಕೆಟಿಗ ಎಂದು ಅಂತಿಮಗೊಳಿಸಿದರು.
ಭಾರತೀಯ ಕ್ರಿಕೆಟ್‌ನ ಯಶಸ್ವಿ ಬೌಲರ್‌ಗಳಲ್ಲಿ ಒಬ್ಬರಾದ ಅಶ್ವಿನ್, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ವೇಳೆಗೆ ಮಹತ್ವದ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 106 ಪಂದ್ಯಗಳಿಂದ 537 ವಿಕೆಟ್ ಪಡೆದಿರುವ ಅವರು, ಅನಿಲ್ ಕುಂಬ್ಳೆ (619 ವಿಕೆಟ್) ನಂತರ ಭಾರತದ ಪರ ಅತಿ ಹೆಚ್ಚು ವಿಕೆಟ್ ಕಬಳಿಸಿದ ಎರಡನೇ ಬೌಲರ್ ಎನಿಸಿಕೊಂಡಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ 116 ಪಂದ್ಯಗಳಿಂದ 156 ವಿಕೆಟ್ ಹಾಗೂ ಟಿ20 ಮಾದರಿಯ 65 ಪಂದ್ಯಗಳಿಂದ 72 ವಿಕೆಟ್ ಕಬಳಿಸಿರುವ ಇವರು, ಬ್ಯಾಟಿಂಗ್‌ನಲ್ಲೂ ಉಪಯುಕ್ತ ಕೊಡುಗೆ ನೀಡಿದ್ದಾರೆ. ಒಟ್ಟಾರೆಯಾಗಿ 287 ಅಂತಾರಾಷ್ಟ್ರೀಯ ಪಂದ್ಯಗಳಿಂದ 765 ವಿಕೆಟ್ ಕಬಳಿಸಿರುವ ಅಶ್ವಿನ್, 2011ರ ಏಕದಿನ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡದ ಪ್ರಮುಖ ಭಾಗವಾಗಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ ಮಾತ್ರವಲ್ಲದೆ ಐಪಿಎಲ್‌ನಲ್ಲೂ 221 ಪಂದ್ಯಗಳನ್ನಾಡಿ 187 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದ್ದಾರೆ.

