ಬೆಂಗಳೂರು: ರಾಜ್ಯದಲ್ಲಿ ಈಗ ಎರಡು ರೀತಿಯ ಬರ ಇದೆ. ಮಳೆ ಕೊರತೆಯಿಂದ ನೈಸರ್ಗಿಕ ಬರ ಎದುರಾಗಿದೆ. ಖಜಾನೆ ಖಾಲಿ ಆಗಿರುವುದರಿಂದ ಆರ್ಥಿಕ ಬರ ಉಂಟಾಗಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಅಧಿವೇಶನದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅಶೋಕ್, ರಾಜ್ಯ ಸರ್ಕಾರದ ಬಳಿ ಹಣವಿಲ್ಲ, ಹೊಸ ಯೋಜನೆಗಳಿಗೆ ಅನುದಾನವಿಲ್ಲ. ಹೊಸ ಸಾಲ ಪಡೆಯಲು ಅರ್ಹತೆಯೂ ಇಲ್ಲ ಎಂದು ಖುದ್ದು ಆರ್ಥಿಕ ಇಲಾಖೆಯೇ ಸ್ಪಷ್ಟಪಡಿಸಿದೆ ಎಂದು ತಿಳಿಸಿದ್ದಾರೆ.
ಬರ ಸಮಸ್ಯೆಗಳ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ಆರ್ಥಿಕ ಸಂಕಷ್ಟದ ಬಗ್ಗೆ ಸೆಪ್ಟೆಂಬರ್ 17ರಂದು ಆರ್ಥಿಕ ಇಲಾಖೆ ಬರೆದ ಪತ್ರ ತೋರಿಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಂಗಳೂರಿಗೆ ಹೋಗಿ ಸಂಪುಟ ಸಭೆ ನಡೆಸುವ ಮೊದಲೇ ಈ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಮಳೆ ಕೊರತೆಯಿಂದ ಭೀಕರ ಬರ ಬಂದಿದ್ದರೆ ಸರ್ಕಾರದಲ್ಲಿ ಹಣಕ್ಕೆ ಬರ ಪರಿಸ್ಥಿತಿ ಉಂಟಾಗಿದೆ. ಆರ್ಥಿಕ ಇಲಾಖೆಯೇ ಸರ್ಕಾರಕ್ಕೆ ಕಪಾಳ ಮೋಕ್ಷ ಮಾಡಿದೆ. ಸರ್ಕಾರದ ಅಳಿದುಳಿದ ಮಾನ ಮರ್ಯಾದೆಯನ್ನು ಆರ್ಥಿಕ ಇಲಾಖೆ ಕಳೆದಿದೆ ಎಂದು ಹೇಳಿದ್ದಾರೆ. ಮಂಗಳೂರಿನಲ್ಲಿ ಸಂಪುಟ ಸಭೆ ನಡೆಸುವ ಮೊದಲೇ ಹೊಸ ಯೋಜನೆಗಳಿಗೆ ಹಣವಿಲ್ಲ ಎಂದು ಸ್ಪಷ್ಟ ಅಭಿಪ್ರಾಯವನ್ನು ಆರ್ಥಿಕ ಇಲಾಖೆ ತಿಳಿಸಿದ್ದು, ಇದು ಸರ್ಕಾರದ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದು ಅಶೋಕ್ ಟೀಕಿಸಿದ್ದಾರೆ.
ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಎದುರಾಗಿದೆ. ಸರ್ಕಾರದ ಖಜಾನೆ ಖಾಲಿಯಾಗಿ ಆರ್ಥಿಕ ಬರ ಉಂಟಾಗಿದೆ. ನೈಸರ್ಗಿಕ ಬರಕ್ಕೆ ಪರಿಹಾರ ನೀಡಲು ಆರ್ಥಿಕ ಇಲಾಖೆಯಲ್ಲಿ ಬರ ಬರಬಾರದಲ್ಲವೇ ಎಂದು ಅಶೋಕ್ ಪ್ರಶ್ನಿಸಿದ್ದಾರೆ.
ರಾಜ್ಯವನ್ನು ನೈಸರ್ಗಿಕ ಬರದ ಜೊತೆಗೆ ಆರ್ಥಿಕ ಬರ ಕೂಡಾ ಕಾಡುತ್ತಿದೆ. ನೈಸರ್ಗಿಕ ಬರವನ್ನು ಹೋಗಲಾಡಿಸಲು ಆರ್ಥಿಕ ಬರ ಅಡ್ಡಬರುತ್ತಿದೆ. ರಾಜ್ಯದ ಅರ್ಥ ವ್ಯವಸ್ಥೆ ತೀರಾ ಹದಗೆಟ್ಟಿದೆ, ಹೊಸ ಯೋಜನೆಗಳನ್ನು ಘೋಷಿಸಬೇಡಿ, ಸಾಲ ಮಾಡುವ ಅರ್ಹತೆಯನ್ನೂ ರಾಜ್ಯ ಸರ್ಕಾರ ಕಳೆದುಕೊಂಡಿದೆ ಎಂದು ಆರ್ಥಿಕ ಇಲಾಖೆ ಹೇಳಿದೆ. ಇದು ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಸಾಕ್ಷಿಯಾಗಿದೆ. ಬರದ ಕುರಿತಾಗಿ ಜುಲೈ ತಿಂಗಳಲ್ಲಿ ವಿರೋಧ ಪಕ್ಷದ ನಾಯಕರ ಕಚೇರಿಯಿಂದ ಬರೆದ ಪತ್ರಕ್ಕೆ ರಾಜ್ಯ ಸರ್ಕಾರ ಉತ್ತರ ನೀಡಿಲ್ಲ. ಇನ್ನು ಜನಸಾಮಾನ್ಯರ ಗತಿಯೇನು ಎಂದು ಪ್ರಶ್ನಿಸಿದ್ದಾರೆ.
ಬರದ ಸಂದರ್ಭದಲ್ಲೂ ಮುಖ್ಯಮಂತ್ರಿಗಳು ಹೆಲಿಕಾಪ್ಟರ್ ಮೂಲಕ ಸರ್ವೆ ಮಾಡಿದ್ದಾರೆ. ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ಬರವನ್ನು ಐಷಾರಾಮಿಯಾಗಿ ಸಮೀಕ್ಷೆ ಮಾಡಿದ ಏಕೈಕ ಸರ್ಕಾರ ಎಂದರೆ ಅದು ಡಿಕೆಶಿ ಸರ್ಕಾರ ಎಂದು ಹೇಳಿದ್ದಾರೆ.
ಕರ್ನಾಟಕದ ಮಲೆನಾಡು ಹಾಗೂ ಪಶ್ಚಿಮ ಘಟ್ಟಗಳ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರುವ ಕಸ್ತೂರಿ ರಂಗನ್ ವರದಿ ಹಾಗೂ ರಾಜ್ಯವನ್ನು ಕಾಡುತ್ತಿರುವ ಭೀಕರ ಬರ ಪರಿಸ್ಥಿತಿಯ ಕುರಿತು ನಡೆದ ಚರ್ಚೆಯಲ್ಲಿ ಭಾಗವಹಿಸಿದ ಅಶೋಕ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸರ್ಕಾರದ ಹಿತಕ್ಕಾಗಿ ಆರ್ಥಿಕ ಇಲಾಖೆ ಸಲಹೆ ನೀಡಿದೆ. ಹಣಕಾಸು ಸಚಿವನಾಗಿ ನನಗೆ ಯಾವ ಯೋಜನೆ ನಿಲ್ಲಿಸಬೇಕು. ಯಾವ ಯೋಜನೆ ಸೇರಿಸಬೇಕು ಎನ್ನುವುದು ಗೊತ್ತಿದೆ. ಎಲ್ಲಾ ಬೆಲೆ ಗಗನಕ್ಕೇರಿದೆ. ಜನರ ಆದಾಯ ಕುಸಿದಿದೆ. ಹೀಗಾಗಿ 5 ಗ್ಯಾರಂಟಿ ನೀಡಿದ್ದೇವೆ. ಜನರು ರೈತರ ಬದುಕಿಗೆ ನೆರವಾಗುತ್ತಿದ್ದೇವೆ ಎಂದು ಹೇಳಿದ್ದಾರೆ.

