ಬೆಂಗಳೂರು: ಹಿಂದೂ ಪಂಚಾಂಗದ ಪ್ರಕಾರ ಚೈತ್ರ ಮಾಸದಿಂದ ಶುರುವಾಗುವ ವರ್ಷದ ನಾಲ್ಕನೇ ತಿಂಗಳು ಆಷಾಢ ಮಾಸ. ಸಾಮಾನ್ಯವಾಗಿ ಆಷಾಢ ಬಂತೆಂದರೆ ಸಾಕು, ಬಹುತೇಕರಲ್ಲಿ ಇದು ಅಶುಭ ಮಾಸ ಎಂಬ ಕಲ್ಪನೆ ಬೇರೂರಿಬಿಟ್ಟಿದೆ. ಮದುವೆ, ಗೃಹಪ್ರವೇಶ, ಉಪನಯನ, ನಾಮಕರಣ, ಹೊಸ ವ್ಯಾಪಾರ, ಜಮೀನು-ವಾಹನ ಖರೀದಿ ಸೇರಿದಂತೆ ಯಾವುದೇ ಶುಭ ಕಾರ್ಯಗಳಿಗೆ ಆಡುಮಾತಿನಲ್ಲಿ ಶೂನ್ಯ ಮಾಸ ಎನ್ನಲಾಗುವ ಈ ತಿಂಗಳಲ್ಲಿ ಬ್ರೇಕ್ ಬೀಳುತ್ತದೆ. ಆದರೆ, ಆಷಾಢ ಮಾಸ ಅಶುಭ ಎಂದು ಜಗತ್ತಿನ ಯಾವುದೇ ಶಾಸ್ತ್ರಗಳಲ್ಲೂ ಉಲ್ಲೇಖವಾಗಿಲ್ಲ ಎನ್ನುವುದು ಹಲವರಿಗೆ ಗೊತ್ತಿಲ್ಲದ ಸತ್ಯ
ಲೌಕಿಕ ಕಾರ್ಯಗಳಿಗೆ ಇದು ಅಶುಭ ಎನಿಸಿಕೊಂಡರೂ, ಆಧ್ಯಾತ್ಮಿಕ ಹಾಗೂ ದೈವಿಕ ಕಾರ್ಯಗಳಿಗೆ ಆಷಾಢ ಮಾಸ ಅತ್ಯಂತ ಶ್ರೇಷ್ಠ. ಹಾಗಾದರೆ ಈ ಮಾಸದಲ್ಲಿ ಶುಭ ಕಾರ್ಯಗಳನ್ನು ಯಾಕೆ ನಿಷೇಧಿಸಲಾಯಿತು? ಇದರ ಹಿಂದಿರುವ ಪುರಾಣ, ಸಂಪ್ರದಾಯ ಮತ್ತು ವೈಜ್ಞಾನಿಕ ಕಾರಣಗಳೇನು? ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ನೂರಾರು ವರ್ಷಗಳ ಹಿಂದಿನ ಇತಿಹಾಸ: ಅಂದು ಶುಭ ಕಾರ್ಯ ನಿಷೇಧಿಸಿದ್ದು ಏಕೆ?
ಹಿಂದಿನ ಕಾಲದಲ್ಲಿ ಆಷಾಢ ಮಾಸ ಆರಂಭವಾಯಿತೆಂದರೆ ಮುಂಗಾರು ಮಳೆಯ ಆರ್ಭಟ ವಿಪರೀತವಾಗಿರುತ್ತಿತ್ತು. ನಿರಂತರ ಗಾಳಿ-ಮಳೆಯಿಂದಾಗಿ ಸಂಚಾರಕ್ಕೆ ತೀವ್ರ ಅಡೆತಡೆ ಉಂಟಾಗುತ್ತಿತ್ತು. ಮತ್ತೊಂದೆಡೆ, ಇದು ರೈತರಿಗೆ ಹೊಲ-ಗದ್ದೆಗಳಲ್ಲಿ ಬಿಡುವಿಲ್ಲದ ಕೆಲಸದ ಸಮಯ. ಇಂತಹ ಕೃಷಿ ಚಟುವಟಿಕೆಗಳ ನಡುವೆ ಜನರಿಗೆ ಬೇರೆ ವ್ಯವಹಾರಗಳಿಗೆ ಸಮಯವೇ ಸಿಗುತ್ತಿರಲಿಲ್ಲ ಹಾಗೂ ಮಳೆಯ ಕಾರಣದಿಂದ ಅನಾನುಕೂಲತೆ ಹೆಚ್ಚಿರುತ್ತಿತ್ತು. ಈ ಪ್ರಾಯೋಗಿಕ ಕಾರಣಗಳಿಗಾಗಿಯೇ ಹಿರಿಯರು ಆಷಾಢದಲ್ಲಿ ಹಬ್ಬ-ಹರಿದಿನ, ಮದುವೆಗಳಂತಹ ಆಡಂಬರದ ಕಾರ್ಯಗಳನ್ನು ಬದಿಗಿಟ್ಟಿದ್ದರು.
ನವ ದಂಪತಿಗಳೇಕೆ ದೂರವಿರಬೇಕು?
ಆಷಾಢ ಮಾಸದಲ್ಲಿ ಅತ್ತೆ ಮತ್ತು ಸೊಸೆ ಒಂದೇ ಮನೆಯಲ್ಲಿ ಇರಬಾರದು ಹಾಗೂ ಹೊಸದಾಗಿ ಮದುವೆಯಾದ ನವ ದಂಪತಿಯನ್ನು ದೂರ ಇಟ್ಟು, ಸೊಸೆಯನ್ನು ತವರು ಮನೆಗೆ ಕಳಿಸುವ ಸಂಪ್ರದಾಯ ನಮ್ಮಲ್ಲಿದೆ. ಇದರ ಹಿಂದೆ ಒಂದು ಸಾಮಾಜಿಕ ಹಾಗೂ ಮತ್ತೊಂದು ಪ್ರಬಲ ವೈಜ್ಞಾನಿಕ ಕಾರಣವಿದೆ:
ಸಾಮಾಜಿಕ ಕಾರಣ: ಆಷಾಢದಲ್ಲಿ ಮಳೆ ಹೆಚ್ಚು ಇರುವುದರಿಂದ ಮನೆಯೊಳಗೆ ಹೆಣ್ಣುಮಕ್ಕಳಿಗೆ ಕೆಲಸದ ಒತ್ತಡ ಜಾಸ್ತಿ ಇರುತ್ತಿತ್ತು. ಅತ್ತೆಯಾದವರು ಸೊಸೆಗೆ ಹೆಚ್ಚು ಕೆಲಸದ ಒತ್ತಡ ತಂದು, ಇಬ್ಬರ ನಡುವೆ ವೈಮನಸ್ಸು ಅಥವಾ ಜಗಳವಾಗಬಾರದು ಎಂಬ ಕಾರಣಕ್ಕೆ ಒಂದು ತಿಂಗಳು ತವರಿಗೆ ಕಳಿಸುವ ಪದ್ಧತಿ ಇರಬಹುದು.
ವೈಜ್ಞಾನಿಕ ರಹಸ್ಯ: ಆಷಾಢ ಮಾಸದಲ್ಲಿ ಮಹಿಳೆ ಗರ್ಭಧರಿಸಿದರೆ, ಒಂಬತ್ತು ತಿಂಗಳ ನಂತರ ಸರಿಯಾಗಿ ಬೇಸಿಗೆಯ ಕಡುಬಿಸಿಲಿನ ಚೈತ್ರ ಮಾಸದಲ್ಲಿ (ಮಾರ್ಚ್-ಏಪ್ರಿಲ್) ಮಗುವಿನ ಜನನವಾಗುತ್ತದೆ. ಅತಿಯಾದ ಬಿಸಿಲಿನ ತಾಪವು ಬಾಣಂತಿ ತಾಯಿ ಮತ್ತು ನವಜಾತ ಶಿಶುವಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂಬ ದೂರದೃಷ್ಟಿಯಿಂದ ಹಿರಿಯರು ಈ ನಿಯಮ ರೂಪಿಸಿದ್ದರು.
ಆರೋಗ್ಯದ ಹಿಂದಿರುವ ವೈಜ್ಞಾನಿಕ ರಹಸ್ಯವೇನು?
ಮುಂಗಾರು ಮಳೆಯ ಆರಂಭದ ಸಮಯವಾದ್ದರಿಂದ ವಾತಾವರಣದಲ್ಲಿ ಭಾರಿ ಬದಲಾವಣೆಗಳಾಗುತ್ತವೆ. ಕಲುಷಿತ ನೀರು ಮತ್ತು ಗಾಳಿಯಿಂದಾಗಿ ಸಾಂಕ್ರಾಮಿಕ ರೋಗಗಳು ವೇಗವಾಗಿ ಹರಡುವ ಅಪಾಯವಿರುತ್ತದೆ. ಜೊತೆಗೆ, ಈ ಕಾಲದಲ್ಲಿ ಮನುಷ್ಯನ ಜೀರ್ಣಶಕ್ತಿ ತುಂಬಾ ದುರ್ಬಲವಾಗಿರುತ್ತದೆ. ಇಂತಹ ಸಮಯದಲ್ಲಿ ಮದುವೆ ಸಮಾರಂಭಗಳನ್ನು ಏರ್ಪಡಿಸಿ, ಸಿಹಿ ಹಾಗೂ ಭಾರಿ ಭೋಜನ ಮಾಡಿದರೆ ಆರೋಗ್ಯ ಕೆಡುತ್ತದೆ. ಇದೇ ಕಾರಣಕ್ಕೆ ಆಷಾಢದಲ್ಲಿ ಲಘು ಆಹಾರ, ಉಪವಾಸ ಮತ್ತು ವ್ರತಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ.
ದೈವಿಕ ಕಾರ್ಯಗಳಿಗೆ ಅತ್ಯಂತ ಶ್ರೇಷ್ಠ ಮಾಸ
ಶುಭ ಕಾರ್ಯಗಳಿಗೆ ಬ್ರೇಕ್ ಬಿದ್ದರೂ, ಜಪ-ತಪ, ಸಾಧನೆ ಮತ್ತು ದೇವತಾ ಕಾರ್ಯಗಳಿಗೆ ಆಷಾಢದಷ್ಟು ಪವಿತ್ರ ತಿಂಗಳು ಮತ್ತೊಂದಿಲ್ಲ. ಪುರಾಣಗಳ ಪ್ರಕಾರ ಈ ಮಾಸದ ಮಹತ್ವ ಅಪಾರ:
ದೈವಿಕ ಘಟನೆಗಳು: ಶಿವನು ಪಾರ್ವತಿಗೆ ಅಮರತ್ವದ ರಹಸ್ಯ ಹೇಳಿದ್ದು, ಗಂಗೆ ಭೂಮಿಗೆ ಉತ್ತರಾಭಿಮುಖವಾಗಿ ಹರಿದು ಬಂದಿದ್ದು ಹಾಗೂ ಮಹಾ ಪತಿವ್ರತೆ ಅನುಸೂಯಾದೇವಿ ಸೋಮವಾರದ ಶಿವ ವ್ರತ ಮಾಡಿದ್ದು ಇದೇ ಮಾಸದಲ್ಲಿ. ಇಂದ್ರನು ಗೌತಮ ಋಷಿಗಳಿಂದ ಪಡೆದ ಶಾಪದ ವಿಮೋಚನೆಗಾಗಿ ಸೋಮೇಶ್ವರ ವ್ರತ ಮಾಡಿದ್ದೂ ಆಷಾಢದಲ್ಲೇ. ಬಲಿ ಚಕ್ರವರ್ತಿ ಶಾಂಡಿಲ್ಯ ವ್ರತ ಪ್ರಾರಂಭ ಮಾಡಿದ್ದೂ ಇದೇ ಕಾಲದಲ್ಲಿ.
ಪ್ರಮುಖ ವ್ರತಗಳು: ಆಷಾಢ ಏಕಾದಶಿಯಂದು (ದೇವಶಯನಿ ಏಕಾದಶಿ) ಶ್ರೀಹರಿ ವಿಷ್ಣುವು ಯೋಗನಿದ್ರೆಗೆ ಜಾರುತ್ತಾನೆ ಮತ್ತು ಚಾತುರ್ಮಾಸ್ಯ ವ್ರತ ಆರಂಭವಾಗುತ್ತದೆ. ಸುಮಂಗಲಿಯರು ದೀರ್ಘಕಾಲದ ಮಾಂಗಲ್ಯ ಪ್ರಾಪ್ತಿಗಾಗಿ ಆಷಾಢದ ಅಮಾವಾಸ್ಯೆಯಂದು ‘ಜ್ಯೋತಿ ಭೀಮೇಶ್ವರ ವ್ರತ’ (ಭೀಮನ ಅಮಾವಾಸ್ಯೆ) ಆಚರಿಸುತ್ತಾರೆ.
ವಿಶೇಷ ಆಚರಣೆಗಳು: ವಿಶ್ವಪ್ರಸಿದ್ಧ ಅಮರನಾಥದ ಹಿಮಲಿಂಗ ದರ್ಶನ ಆರಂಭವಾಗುವುದು ಇದೇ ಸಮಯದಲ್ಲಿ. ಜ್ಞಾನದ ಸಂಕೇತವಾದ ‘ಗುರು ಪೂರ್ಣಿಮೆ’ಯನ್ನು ಆಚರಿಸಿ ಮಠಗಳಲ್ಲಿ ಚಾತುರ್ಮಾಸ್ಯ ಆರಂಭಿಸಲಾಗುತ್ತದೆ. ಆಷಾಢ ಶುಕ್ರವಾರಗಳಂದು ಚಾಮುಂಡೇಶ್ವರಿ ದೇವಿಯ ಜನ್ಮದಿನೋತ್ಸವ ಹಾಗೂ ಲಕ್ಷ್ಮಿ ಪೂಜೆಯನ್ನು ಸಡಗರದಿಂದ ಮಾಡಲಾಗುತ್ತದೆ. ಕೇವಲ ಹಿಂದೂ ಧರ್ಮ ಮಾತ್ರವಲ್ಲ, ಮುಸ್ಲಿಂ ಬಾಂಧವರು ಪವಿತ್ರ ‘ರೋಜಾ’ ಆಚರಿಸುವುದೂ ಸಹ ಇದೇ ಅವಧಿಯಲ್ಲೇ ಬರುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ಆಷಾಢ ಮಾಸವನ್ನು ಕೇವಲ ‘ಅಶುಭ’ ಎಂದು ಮೂಢನಂಬಿಕೆಯಿಂದ ಭಾವಿಸುವುದು ತಪ್ಪು. ಆಡಂಬರಗಳನ್ನು ಬದಿಗೊತ್ತಿ, ದೇವರ ಧ್ಯಾನ, ಆತ್ಮಾವಲೋಕನ ಮತ್ತು ದೈಹಿಕ ಆರೋಗ್ಯದ ಕಡೆಗೆ ಗಮನಹರಿಸಲು ನಮ್ಮ ಋಷಿಮುನಿಗಳು ರೂಪಿಸಿದ ಅದ್ಭುತವಾದ ವೈಜ್ಞಾನಿಕ ವ್ಯವಸ್ಥೆ ಇದಾಗಿದೆ.

