ದಿನವಿಡೀ ಕೆಲಸದ ಒತ್ತಡ, ಆಯಾಸ ಹಾಗೂ ಧಾವಂತದ ನಡುವೆ ಮಧ್ಯಾಹ್ನ ಕೊಂಚ ಹೊತ್ತು ನಿದ್ರಿಸುವುದು ಹಲವರಿಗೆ ರೂಢಿ. ಮಧ್ಯಾಹ್ನ ಊಟವಾದ ತಕ್ಷಣ ಕಣ್ಣುಗಳು ತಾನಾಗಿಯೇ ಮುಚ್ಚಿಕೊಳ್ಳುತ್ತವೆ. ಕೆಲವರಿಗೆ ಇದು ಮೈಗಳ್ಳತನ ಎನಿಸಿದರೆ, ಇನ್ನು ಕೆಲವರಿಗೆ ದೇಹಕ್ಕೆ ತಕ್ಷಣ ಶಕ್ತಿ ನೀಡುವ ಉತ್ತಮ ಅಭ್ಯಾಸ. ಆದರೆ ಮಧ್ಯಾಹ್ನದ ನಿದ್ರೆ ಆರೋಗ್ಯಕ್ಕೆ ನಿಜಕ್ಕೂ ಒಳ್ಳೆಯದೇ ಅಥವಾ ಕೆಟ್ಟದ್ದೇ ಎಂಬ ಗೊಂದಲ ಬಹುತೇಕರಲ್ಲಿರುತ್ತದೆ.
ಆರೋಗ್ಯ ತಜ್ಞರ ಪ್ರಕಾರ ಮಧ್ಯಾಹ್ನ ಕೊಂಚ ಸಮಯ ವಿಶ್ರಾಂತಿ ಪಡೆಯುವುದು ಅಥವಾ ಸಣ್ಣ ನಿದ್ರೆ ಮಾಡುವುದು ತಪ್ಪು ಅಲ್ಲ. ಮಧ್ಯಾಹ್ನದ ಸಮಯದಲ್ಲಿ ಕೇವಲ 15 ರಿಂದ 20 ನಿಮಿಷಗಳ ಕಾಲ ನಿದ್ರಿಸುವುದರಿಂದ ಮನಸ್ಸಿಗೆ ಹಗುರವೆನಿಸುತ್ತದೆ, ಆಯಾಸ ಕಡಿಮೆಯಾಗಿ ಏಕಾಗ್ರತೆ ಹೆಚ್ಚುತ್ತದೆ. ಇದನ್ನು ‘ಪವರ್ ನ್ಯಾಪ್’ ಎಂದು ಕರೆಯಲಾಗುತ್ತದೆ. ಇದು ದೈಹಿಕ ಮತ್ತು ಮಾನಸಿಕ ಚೈತನ್ಯವನ್ನು ಮರಳಿ ತರಲು ಸಹಾಯ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ.
ಆದರೆ ಮಧ್ಯಾಹ್ನ ಗಂಟೆಗಟ್ಟಲೆ ನಿದ್ರೆ ಮಾಡುವ ಅಭ್ಯಾಸ ಆರೋಗ್ಯಕ್ಕೆ ಕಂಟಕವಾಗಬಹುದು. ಊಟವಾದ ತಕ್ಷಣ ದೀರ್ಘಾವಧಿ ಮಲಗುವುದರಿಂದ ಜೀರ್ಣಕ್ರಿಯೆ ಮಂದಗತಿಯಲ್ಲಿ ಸಾಗುತ್ತದೆ. ಇದರಿಂದ ದೇಹದಲ್ಲಿ ಅನಗತ್ಯ ಕೊಬ್ಬು ಶೇಖರಣೆಯಾಗಿ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಅಲ್ಲದೆ ಮಧ್ಯಾಹ್ನದ ಸುದೀರ್ಘ ನಿದ್ರೆಯು ರಾತ್ರಿಯ ನಿದ್ರಾಹೀನತೆಗೆ ಮುಖ್ಯ ಕಾರಣವಾಗುತ್ತದೆ. ರಾತ್ರಿ ಸರಿಯಾಗಿ ನಿದ್ರೆ ಬರದಿದ್ದರೆ ಮರುದಿನ ಇಡೀ ದಿನ ನಿರಾಸಕ್ತಿ ಮತ್ತು ಕಿರಿಕಿರಿ ಉಂಟಾಗುತ್ತದೆ.
ಅತಿಯಾದ ಮಧ್ಯಾಹ್ನದ ನಿದ್ರೆಯು ಮಧುಮೇಹ ಮತ್ತು ಹೃದಯಸಂಬಂಧಿ ತೊಂದರೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಕೆಲವು ಅಧ್ಯಯನಗಳು ತಿಳಿಸುತ್ತವೆ. ಆದ್ದರಿಂದ ಮಧ್ಯಾಹ್ನದ ನಿದ್ರೆಯನ್ನು ಕೇವಲ 20 ನಿಮಿಷಗಳಿಗೆ ಸೀಮಿತಗೊಳಿಸುವುದು ಸೂಕ್ತ. ಊಟವಾದ ತಕ್ಷಣ ಮಲಗುವ ಬದಲು ಕೊಂಚ ಸಮಯ ನಡೆದಾಡಿ ನಂತರ ಸಣ್ಣ ವಿಶ್ರಾಂತಿ ಪಡೆದರೆ ಆರೋಗ್ಯಕ್ಕೆ ಯಾವುದೇ ಹಾನಿಯಾಗುವುದಿಲ್ಲ.

