HomeLatest Newsಉಳಿದ ಅನ್ನದಿಂದ ಐದೇ ನಿಮಿಷದಲ್ಲಿ ಮಾಡಿ ಮಹಾರಾಷ್ಟ್ರ ಶೈಲಿಯ ರುಚಿಕರ ಫೋಡ್ನಿಚಾ ಭಾತ್: ಇಲ್ಲಿದೆ ಸುಲಭ...

ಉಳಿದ ಅನ್ನದಿಂದ ಐದೇ ನಿಮಿಷದಲ್ಲಿ ಮಾಡಿ ಮಹಾರಾಷ್ಟ್ರ ಶೈಲಿಯ ರುಚಿಕರ ಫೋಡ್ನಿಚಾ ಭಾತ್: ಇಲ್ಲಿದೆ ಸುಲಭ ರೆಸಿಪಿ

ಮನೆಯಲ್ಲಿ ರಾತ್ರಿ ಉಳಿದ ಅನ್ನವನ್ನು ಏನು ಮಾಡುವುದು ಎಂಬ ಚಿಂತೆ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತದೆ. ಸಾಮಾನ್ಯವಾಗಿ ದಕ್ಷಿಣ ಭಾರತದಲ್ಲಿ ಉಳಿದ ಅನ್ನದಿಂದ ಚಿತ್ರಾನ್ನ ಅಥವಾ ಒಗ್ಗರಣೆ ಅನ್ನ ಮಾಡುವುದು ವಾಡಿಕೆ. ಅದೇ ರೀತಿ ಮಹಾರಾಷ್ಟ್ರದಲ್ಲಿ ಉಳಿದ ಅನ್ನದಿಂದ ಅತ್ಯಂತ ರುಚಿಕರ ಹಾಗೂ ಸುಲಭವಾಗಿ ತಯಾರಿಸಬಹುದಾದ ಒಂದು ಸಾಂಪ್ರದಾಯಿಕ ಉಪಹಾರವಿದೆ. ಅದೇ ‘ಫೋಡ್ನಿಚಾ ಭಾತ್’. ಕಡಿಮೆ ಸಮಯದಲ್ಲಿ ತಯಾರಾಗುವ ಈ ಖಾದ್ಯವನ್ನು ಬೆಳಗಿನ ಉಪಹಾರಕ್ಕೆ ಅಥವಾ ರಾತ್ರಿಯ ಲಘು ಭೋಜನಕ್ಕೆ ಸವಿಯಬಹುದು. ಇದನ್ನು ಹಾಗೆಯೇ ತಿನ್ನಬಹುದು ಅಥವಾ ಮೊಸರು, ಉಪ್ಪಿನಕಾಯಿ ಹಾಗೂ ದಾಲ್ ಜೊತೆಗೂ ಜೋಡಿಸಬಹುದು. ಅತ್ಯಂತ ಸರಳವಾಗಿ ಇದನ್ನು ಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು

ಬೇಯಿಸಿದ ಅನ್ನ ಅಥವಾ ಉಳಿದ ಅನ್ನ: ಎರಡು ಕಪ್ ಕಡಲೇಕಾಯಿ ಬೀಜ: ಒಂದು ದೊಡ್ಡ ಚಮಚ ಸಾಸಿವೆ: ಕಾಲು ಚಮಚ ಜೀರಿಗೆ: ಕಾಲು ಚಮಚ ಒಣ ಕೆಂಪು ಮೆಣಸಿನಕಾಯಿ: ಒಂದು ಹಸಿರು ಮೆಣಸಿನಕಾಯಿ: ಎರಡು ಸೀಳಿದ್ದು ಸಣ್ಣಗೆ ಹೆಚ್ಚಿದ ಶುಂಠಿ ಮತ್ತು ಬೆಳ್ಳುಳ್ಳಿ: ಅರ್ಧ ಇಂಚು ಶುಂಠಿ ಹಾಗೂ ಎರಡು ಎಸಳು ಬೆಳ್ಳುಳ್ಳಿ ಕರಿಬೇವು: ಎರಡು ಕಡ್ಡಿ ಈರುಳ್ಳಿ: ಒಂದು ಸಣ್ಣಗೆ ಹೆಚ್ಚಿದ್ದು ಅರಿಶಿನ ಪುಡಿ: ಅರ್ಧ ಚಮಚ ನಿಂಬೆ ರಸ: ಒಂದು ಚಮಚ ಕೊತ್ತಂಬರಿ ಸೊಪ್ಪು: ಸ್ವಲ್ಪ ಕಾಯಿತುರಿ: ಒಂದು ಚಮಚ ಐಚ್ಛಿಕ ಎಣ್ಣೆ ಅಥವಾ ತುಪ್ಪ: ಎರಡು ಚಮಚ ರುಚಿಗೆ ತಕ್ಕಷ್ಟು ಉಪ್ಪು

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಯಾರಿಸುವ ವಿಧಾನ

ಮೊದಲಿಗೆ ಒಂದು ಬಾಣಲೆಯಲ್ಲಿ ಎಣ್ಣೆ ಅಥವಾ ತುಪ್ಪವನ್ನು ಬಿಸಿ ಮಾಡಿ. ಎಣ್ಣೆ ಬಿಸಿಯಾದ ನಂತರ ಅದರಲ್ಲಿ ಕಡಲೇಕಾಯಿ ಬೀಜಗಳನ್ನು ಹಾಕಿ ಚೆನ್ನಾಗಿ ಹುರಿದು ಪ್ರತ್ಯೇಕವಾಗಿ ಒಂದು ತಟ್ಟೆಯಲ್ಲಿ ತೆಗೆದಿಟ್ಟುಕೊಳ್ಳಿ.

ನಂತರ ಅದೇ ಬಾಣಲೆಯಲ್ಲಿ ಉಳಿದಿರುವ ಎಣ್ಣೆಗೆ ಸಾಸಿವೆ, ಜೀರಿಗೆ ಮತ್ತು ಒಣ ಕೆಂಪು ಮೆಣಸಿನಕಾಯಿಯನ್ನು ಹಾಕಿ ಸಿಡಿಸಿ. ಆ ಬಳಿಕ ಸಣ್ಣಗೆ ಹೆಚ್ಚಿದ ಶುಂಠಿ, ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿ ಮತ್ತು ಕರಿಬೇವನ್ನು ಸೇರಿಸಿ ಒಂದು ನಿಮಿಷಗಳ ಕಾಲ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ.

ಈ ಒಗ್ಗರಣೆಗೆ ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಸೇರಿಸಿ. ಈರುಳ್ಳಿ ತಿಳಿ ಗುಲಾಬಿ ಬಣ್ಣಕ್ಕೆ ತಿರುಗುವವರೆಗೆ ಚೆನ್ನಾಗಿ ಬಾಡಿಸಿ. ನಂತರ ಅದಕ್ಕೆ ಅರಿಶಿನ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಕೈಯಾಡಿಸಿ.

ಈಗ ಬಾಣಲೆಗೆ ಬೇಯಿಸಿಟ್ಟ ಅನ್ನವನ್ನು ಸೇರಿಸಿ ಒಗ್ಗರಣೆಯೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ. ಅನ್ನವು ಒಗ್ಗರಣೆಯೊಂದಿಗೆ ಸರಿಯಾಗಿ ಬೆರೆತ ನಂತರ ಉರಿಯನ್ನು ನಂದಿಸಿ.

ಕೊನೆಯಲ್ಲಿ ಈ ಅನ್ನಕ್ಕೆ ಮೊದಲೇ ಹುರಿದಿಟ್ಟುಕೊಂಡ ಕಡಲೇಕಾಯಿ ಬೀಜಗಳು, ನಿಂಬೆ ರಸ, ಕಾಯಿತುರಿ ಹಾಗೂ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಬೆರೆಸಿದರೆ ಬಿಸಿಬಿಸಿಯಾದ ಫೋಡ್ನಿಚಾ ಭಾತ್ ಸವಿಯಲು ಸಿದ್ಧವಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular